ಅಧಿಕಾರ ಹಸ್ತಾಂತರಿಸದಿದ್ದರೆ ಬಲಪ್ರಯೋಗ: ನೈಜರ್ ಸೇನಾಡಳಿತಕ್ಕೆ ಆಫ್ರಿಕಾ ಮುಖಂಡರ ಎಚ್ಚರಿಕೆ

Update: 2023-07-31 18:38 GMT

ಅಬುಜಾ, ಜು.31: ಒಂದು ವಾರದೊಳಗೆ ಅಧಿಕಾರ ಬಿಟ್ಟುಕೊಡಬೇಕು ಅಥವಾ ಬಲಪ್ರಯೋಗದ ಸಂಭಾವ್ಯ ಬಳಕೆಯನ್ನು ಎದುರಿಸಲು ಸಿದ್ಧವಾಗಬೇಕು ಎಂದು ನೈಜರ್‍ನ ಸೇನಾಡಳಿತಕ್ಕೆ ಆಫ್ರಿಕಾ ಮುಖಂಡರು ಎಚ್ಚರಿಕೆ ನೀಡಿದ್ದು ನೈಜರ್‍ನ ವಿರುದ್ಧ ಆರ್ಥಿಕ ನಿರ್ಬಂಧ ವಿಧಿಸಿದ್ದಾರೆ.

ಕಳೆದ ಬುಧವಾರ ನೈಜರ್‍ನಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ ಅಧ್ಯಕ್ಷರ ಭದ್ರತಾ ಪಡೆ(ಪ್ರೆಸಿಡೆನ್ಶಿಯಲ್ ಗಾರ್ಡ್), ಚುನಾಯಿತ ಅಧ್ಯಕ್ಷ ಮುಹಮ್ಮದ್ ಬಝೌಮ್‍ರನ್ನು ಬಂಧನದಲ್ಲಿರಿಸಿದೆ. ಪ್ರೆಸಿಡೆನ್ಶಿಯಲ್ ಗಾರ್ಡ್‍ನ ಮುಖಂಡ ಜನರಲ್ ಅಬ್ದುರಹಮಾನ್ ತಿಯಾನಿ ತಾನೇ ದೇಶದ ಮುಖಂಡ ಎಂದು ಘೋಷಿಸಿಕೊಂಡಿದ್ದಾರೆ. ದಂಗೆಯ ಬಳಿಕ ನೈಜರ್ ಜತೆಗಿನ ಸಹಕಾರ ಸಂಬಂಧ ಹಾಗೂ ಆರ್ಥಿಕ ನೆರವನ್ನು ಫ್ರಾನ್ಸ್ ಮತ್ತು ಯುರೋಪಿಯನ್ ಯೂನಿಯನ್ ಅಮಾನತುಗೊಳಿಸಿದ್ದರೆ, ತಾನು ಒದಗಿಸುತ್ತಿರುವ ನೆರವನ್ನೂ ಸ್ಥಗಿತಗೊಳಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ.

ಈ ಮಧ್ಯೆ, ಅಧ್ಯಕ್ಷ ಬಝೌಮ್‍ರಿಗೆ ವಾರದೊಳಗೆ ಅಧಿಕಾರ ಹಸ್ತಾಂತರಿಸಬೇಕು. ಇಲ್ಲದಿದ್ದರೆ ಸಾಂವಿಧಾನಿಕ ವ್ಯವಸ್ಥೆಯ ಮರುಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗುವುದು. ಸೇನೆಯ ಬಳಕೆಯೂ ಈ ಕ್ರಮದಲ್ಲಿ ಸೇರಿದೆ ಎಂದು ನೈಜೀರಿಯಾದಲ್ಲಿ ನಡೆದ ತುರ್ತು ಸಭೆಯಲ್ಲಿ ಪಶ್ಚಿಮ ಆಫ್ರಿಕನ್ ದೇಶಗಳ ಆರ್ಥಿಕ ಸಂಘಟನೆ(ಇಕೊವಸ್) ಆಗ್ರಹಿಸಿದೆ.

ಎಚ್ಚರಿಕೆಯ ಸಂದೇಶ ಕಳುಹಿಸಲು ನಮಗೆ ಹೆಚ್ಚಿನ ಸಮಯವಿಲ್ಲ. ಇದು ಕ್ರಮ ಕೈಗೊಳ್ಳುವ ಸಮಯವಾಗಿದೆ ಎಂದು ನೈಜೀರಿಯಾದ ಅಧ್ಯಕ್ಷ ಇಕೊವಸ್‍ನ ಮುಖ್ಯಸ್ಥ ಬೊಲಾ ಟಿನುಬು ಹೇಳಿದ್ದಾರೆ. `ನೈಜರ್‍ನಲ್ಲಿ ಸಾಂವಿಧಾನಿಕ ಸುವ್ಯವಸ್ಥೆಯ ರಕ್ಷಣೆಗೆ ಇಕೊವಸ್ ಮುಖ್ಯಸ್ಥರು ಹಾಗೂ ಸರಕಾರಗಳ ಸಶಕ್ತ ನಾಯಕತ್ವವನ್ನು ಸ್ವಾಗತಿಸುವುದಾಗಿ ಅಮೆರಿಕ ಹೇಳಿದ್ದು ಬಝೌಮ್‍ರನ್ನು ತಕ್ಷಣ ಬಿಡುಗಡೆಗೊಳಿಸಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಗೊಂಡಿರುವ ಸರಕಾರದ ಮರುಸ್ಥಾಪನೆಗೆ ಆಗ್ರಹಿಸಿದೆ. ನೈಜರ್ ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವದ ರಕ್ಷಣೆಗೆ ಪಶ್ಚಿಮ ಆಫ್ರಿಕಾ ಮುಖಂಡರು ನಡೆಸುವ ಯಾವುದೇ ಕ್ರಮದ ಜತೆಗೆ ಅಮೆರಿಕ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಇಕೊವಸ್‍ನ ಸಭೆಯನ್ನು ಖಂಡಿಸಿರುವ ಸೇನಾಡಳಿತ, ನೈಜರ್ ವಿರುದ್ಧ ಆಕ್ರಮಣಕಾರಿ ಯೋಜನೆ ರೂಪಿಸುವುದು ಈ ಸಭೆಯ ಉದ್ದೇಶವಾಗಿದೆ . ನೈಜರ್‍ನಲ್ಲಿ ಕೆಲ ಪಾಶ್ಚಿಮಾತ್ಯ ದೇಶಗಳು ಹಾಗೂ ಪ್ರಾದೇಶಿಕ ಸಂಘಟನೆಯ ಸದಸ್ಯರಲ್ಲದ ಆಫ್ರಿಕನ್ ದೇಶಗಳ ಸಹಕಾರದೊಂದಿಗೆ ಮಿಲಿಟರಿ ಹಸ್ತಕ್ಷೇಪ ನಡೆಸುವುದು ಈ ಆಕ್ರಮಣಕಾರಿ ಯೋಜನೆಯ ಭಾಗವಾಗಿದೆ ಎಂದು ಟೀಕಿಸಿದೆ. ನೈಜರ್‍ನಲ್ಲಿ ಫ್ರಾನ್ಸ್‍ನ 1,500 ಸೈನಿಕರು, ಅಮೆರಿಕದ ಸುಮಾರು 1000 ಸೈನಿಕರಿದ್ದಾರೆ. ನೈಜರ್‍ನಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಆ ದೇಶಕ್ಕೆ ನೀಡುತ್ತಿರುವ ಆರ್ಥಿಕ ನೆರವನ್ನು ಅಮಾನತುಗೊಳಿಸಿರುವುದಾಗಿ ಫ್ರಾನ್ಸ್ ಘೋಷಿಸಿದೆ. ನೈಜರ್‍ನ ಸೇನಾಡಳಿತವನ್ನು ಮಾನ್ಯ ಮಾಡುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ಘೋಷಿಸಿದ್ದು ನೈಜರ್ ಜತೆಗಿನ ಭದ್ರತಾ ಸಹಕಾರ ಒಪ್ಪಂದವನ್ನು ತಕ್ಷಣದಿಂದ ಸ್ಥಗಿತಗೊಳಿಸುವುದಾಗಿ ಹೇಳಿದೆ.

ಆರ್ಥಿಕ ದಿಗ್ಬಂಧ

ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಸೇನಾ ದಂಗೆಯ ವಿರುದ್ಧ ಮಧ್ಯಪ್ರವೇಶಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಭದ್ರತಾ ಪಡೆಯನ್ನು ರಚಿಸಲು 15 ಸದಸ್ಯ ಬಲದ ಇಕೊವಸ್ ಕಳೆದ ವರ್ಷ ನಿರ್ಧರಿಸಿತ್ತು. ಇದೀಗ ನೈಜರ್‍ನ ಸೇನಾಡಳಿತದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಲಾಗಿದ್ದು ನೈಜರ್ ಜತೆಗಿನ ಎಲ್ಲಾ ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದೆ. ವಿಶ್ವದ ಅತೀ ಬಡದೇಶವಾಗಿರುವ ನೈಜರ್, ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಯಾವಾಗಲೂ ಕಡೆಯ ಸ್ಥಾನದಲ್ಲಿರುತ್ತದೆ. ಆರ್ಥಿಕ ದಿಗ್ಬಂಧಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹುದೊಡ್ಡ ವಿಪತ್ತು ಆಗಲಿವೆ ಎಂದು ನೈಜರ್‍ನ ಪ್ರಧಾನಿ ಒಹುಮೊಡೊವು ಮಹಮ್ಮದ್ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ, ಅಧ್ಯಕ್ಷರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಝೌಮ್‍ರ ಪಿಎನ್‍ಡಿಎಸ್ ಪಕ್ಷ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News