ಸ್ಪೇಸ್‍ಎಕ್ಸ್ ಮಹಿಳೆ ಜತೆ ಎಲಾನ್ ಮಸ್ಕ್ ಅಸಹಜ ಲೈಂಗಿಕ ಸಂಬಂಧ : ಡಬ್ಲ್ಯುಎಸ್‍ಜೆ ವರದಿ
ವಾಷಿಂಗ್ಟನ್: ಟೆಸ್ಲಾ ಮತ್ತು ಸ್ಪೇಸ್‍ಎಕ್ಸ್ ಸಿಇಓ ಎಲಾನ್ ಮಸ್ಕ್ ತಮ್ಮ ಇಬ್ಬರು ಉದ್ಯೋಗಿಗಳ ಜತೆಗೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ ಎಂದು ವಾಲ್‍ಸ್ಟ್ರೀಟ್ ಜರ್ನಲ್ ಪ್ರಕಟಿಸಿರುವ ವಿಶೇಷ ವರದಿಯಲ್ಲಿ ಆಪಾದಿಸಲಾಗಿದೆ.
ಈ ಪೈಕಿ ಒಬ್ಬಾಕೆ ಮಹಿಳೆ ಸ್ಪೇಸ್ ಎಕ್ಸ್ ನಲ್ಲಿ ಇಂಟರ್ನ್‍ಶಿಪ್ ಮಾಡುತ್ತಿದ್ದಾಳೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಮತ್ತೊಬ್ಬಾಕೆ ಮಹಿಳಾ ಉದ್ಯೋಗಿಯ ಜತೆ ಹಲವು ಬಾರಿ, ತನ್ನಿಂದ ಮಗು ಹೊಂದುವಂತೆ ಮಸ್ಕ್ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ. ಈ ಕಾರಣದಿಂದ ಆಕೆಗೆ ವೇತನ ಬಡ್ತಿ ನಿರಾಕರಿಸಿರುವ ಮಸ್ಕ್, ಆಕೆಯ ಕ್ಷಮತೆ ಬಗ್ಗೆಯೂ ದೂರಿದ್ದರು ಎಂದು ವರದಿ ವಿವರಿಸಿದೆ.
ಉಭಯ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳು ಸರಾಗವಾಗಿ ಉದ್ಯೋಗ ನಿರ್ವಹಿಸಲಾಗದ ಸಂಸ್ಕೃತಿ ಬೆಳೆದಿದೆ ಎಂದು ವಾಲ್‍ಸ್ಟ್ರೀಟ್ ಜರ್ನಲ್ ಅಪಾದಿಸಿದೆ. ಜರ್ನನ್ ತನ್ನ ವರದಿಯಲ್ಲಿ ಹಲವು ಎಸ್‍ಎಂಎಸ್ ಸಂದೇಶಗಳು, ಇ-ಮೇಲ್‍ಗಳು ಮತ್ತು ಇತರ ದಾಖಲೆಗಳನ್ನು ಉಲ್ಲೇಖಿಸಿದೆ. ಸಂತ್ರಸ್ತ ಮಹಿಳೆಯರ ಕುಟುಂಬದ ಸದಸ್ಯರು, ಮಾಜಿ ಉದ್ಯೋಗಿಗಳು ಮತ್ತು ಸ್ನೇಹಿತರೂ ಸೇರಿದಂತೆ 48ಕ್ಕೂ ಹೆಚ್ಚು ಮಂದಿಯನ್ನು ಸಂದರ್ಶನ ನಡೆಸಿ ಈ ವರದಿ ಸಿದ್ಧಪಡಿಲಾಗಿದೆ. ಮಸ್ಕ್ ಜತೆಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ ಮಸ್ಕ್ ಜತೆಗಿನ ಲೈಂಗಿಕ ಚಟುವಟಿಕೆಗಳ ಬಗ್ಗೆ ವಿವರ ನೀಡಿದ್ದಾರೆ. ಈ ಬಗ್ಗೆ ಜರ್ನಲ್, ಮಸ್ಕ್ ಅವರ ಪ್ರತಿಕ್ರಿಯೆ ಕೇಳಿದ್ದರೂ, ಅದಕ್ಕೆ ಸ್ಪಂದಿಸಿಲ್ಲ ಎಂದು ವರದಿ ಹೇಳಿದೆ.
"ಆಕೆ ಮತ್ತು ಮಸ್ಕ್ ವರ್ಷದ ಹಿಂದೆ ಆಕೆ ಕಾಲೇಜು ವಿದ್ಯಾರ್ಥಿನಿಯಾಗಿ ಇಂಟರ್ನ್‍ಶಿಪ್ ಮಾಡುತ್ತಿದ್ದ ವೇಳೆ ಭೇಟಿಯಾಗಿದ್ದರು. ಆಕೆ ಸ್ಪೇಸ್‍ಎಕ್ಸ್ ಸುಧಾರಿಸುವ ಹೊಸ ಕಲ್ಪನೆಗಳನ್ನು ಮಂಡಿಸುವ ಸಲುವಾಗಿ ಮಸ್ಕ್ ಅವರನ್ನು ಭೇಟಿ ಮಾಡಿದ್ದಳು. ಇದು ಪ್ರಣಯ ಸಂಬಂಧ, ಚುಂಬನ ಹಾಗೂ ಕ್ರಮೇಣ ಲೈಂಇಕ ಚಟುವಟಿಕೆಗಳಿಗೆ ವಿಸ್ತರಿಸಿತು ಎಂದು ಆಕೆ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದಾಳೆ. ವಿದ್ಯಾರ್ಥಿನಿಯರ ಇಂಟರ್ನ್‍ಶಿಪ್ ಮುಗಿಯುವ ಹಿಂದಿನ ದಿನ ಸಿಸಿಲಿಗೆ ವಿಮಾನದಲ್ಲಿ ಈಕೆಯನ್ನು ಕರೆದೊಯ್ದಿದ್ದರು ಎಂದು ದಾಖಲೆಗಳನ್ನು ಉಲ್ಲೇಖಿಸಿ ವಾಲ್‍ಸ್ಟ್ರೀಟ್ ಜರ್ನಲ್ ಹೇಳಿದೆ. ಈ ಸಂಬಂಧವನ್ನು ಮುಂದುವರಿಸಲು ಮಸ್ಕ್ ಪ್ರಯತ್ನಿಸಿದರೂ, ಮಹಿಳೆ ತಿರಸ್ಕರಿಸಿದರು ಎನ್ನಲಾಗಿದೆ.