“ಸಾಕಷ್ಟಾಯಿತು… ದಯವಿಟ್ಟು ನಿಲ್ಲಿಸಿ”: ಇಸ್ರೇಲ್-ಹಮಾಸ್ ಕದನದ ಅಂತ್ಯಕ್ಕೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ವ್ಯಾಟಿಕನ್ ಸಿಟಿ : “ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಲ್ಲಿ ನಡೆಯುತ್ತಿರುವ ಒತ್ತೆಯಾಳುಗಳು, ಸಾವಿರಾರು ಮಂದಿಯ ಮೃತ್ಯು, ಗಾಯಾಳುಗಳು ಹಾಗೂ ನಿರಾಶ್ರಿತರ ನೋವನ್ನು ನಾನು ಪ್ರತಿ ದಿನ ನನ್ನ ಹೃದಯದಲ್ಲಿಟ್ಟುಕೊಂಡು ಓಡಾಡುತ್ತಿದ್ದೇನೆ. ಗಾಝಾದಲ್ಲಿನ ಕದನವನ್ನು ಅಂತ್ಯಗೊಳಿಸಬೇಕು” ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.
ರೋಮ್ ನ ಆ್ಯಂಗೆಲುಸ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅವರು ಈ ಮಾತುಗಳನ್ನು ಹೇಳಿದ್ದಾರೆ. ಸೇಂಟ್ ಪೀಟರ್ಸ್ ನಲ್ಲಿ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿದ ಫ್ರಾನ್ಸಿಸ್, ಹಮಾಸ್-ಇಸ್ರೇಲ್ ಬಿಕ್ಕಟ್ಟಿನಿಂದ ಮಕ್ಕಳ ಮೇಲಾಗಿರುವ ಪರಿಣಾಮಗಳನ್ನು ಒತ್ತಿ ಹೇಳಿದ್ದು, ಅಕ್ಟೋಬರ್ 7ರಂದು ನಡೆದ ಹಮಾಸ್ ದಾಳಿಯಲ್ಲಿ ಒತ್ತೆಯಾಳುಗಳನ್ನಾಗಿಸಿಕೊಂಡಿರುವವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
“ನೀವು ಈ ಮಾರ್ಗದಲ್ಲಿ ಉತ್ತಮ ಜಗತ್ತನ್ನು ನಿರ್ಮಿಸಬಹುದು ಎಂದು ನಿಜಕ್ಕೂ ನಂಬಿಕೊಂಡಿದ್ದೀರಾ? ನಿಜಕ್ಕೂ ಶಾಂತಿಯನ್ನು ಸ್ಥಾಪಿಸಬಹುದು ಎಂದು ನೀವು ಭಾವಿಸಿದ್ದೀರಾ? ದಯವಿಟ್ಟು ಸಾಕು! ನಾವೆಲ್ಲರೂ ದಯವಿಟ್ಟು ಸಾಕು ಎಂದು ಹೇಳೋಣ! ನಿಲ್ಲಿಸಿ” ಎಂದು ಫ್ರಾನ್ಸಿಸ್ ಕರೆ ನೀಡಿದ್ದಾರೆ.