ಇರಾಕ್ನಲ್ಲಿ ಜನಾಂಗೀಯ ಘರ್ಷಣೆ
ಬಗ್ದಾದ್ : ಇರಾಕ್ನ ಕಿರ್ಕುಕ್ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಕನಿಷ್ಟ ಮೂವರು ಕುಡ್ರ್ಸ್ ಸಮುದಾಯದವರು ಮೃತಪಟ್ಟಿದ್ದು ಇತರ 16 ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ ಉದ್ವಿಗ್ನತೆಯ ನಂತರ ಕಫ್ರ್ಯೂ ಜಾರಿಗೊಳಿಸಲಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಇಬ್ಬರನ್ನು ಎದೆಗೆ ಗುಂಡಿಕ್ಕಿ ಹಾಗೂ ಮತ್ತೊಬ್ಬನನ್ನು ತಲೆಗೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಗಾಯಗೊಂಡವರಲ್ಲಿ ಮೂವರು ಭದ್ರತಾ ಸಿಬಂದಿಗಳೂ ಸೇರಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆಯ ನಿರ್ದೇಶಕ ಝಿಯಾದ್ ಖಲಾಫ್ ಹೇಳಿದ್ದಾರೆ.
ಕುಡ್ರ್ಸ್ ಸಮುದಾಯದವರ ಗುಂಪು ಹಾಗೂ ತುರ್ಕ್ಮನ್ ಮತ್ತು ಅರಬ್ ಸಮುದಾಯದವರ ಗುಂಪು ಶನಿವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದ್ದು ಬಳಿಕ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಆರಂಭವಾಗಿದೆ . ಬಿಗಿ ಭದ್ರತೆಯ ಮಧ್ಯೆಯೂ ಹಿಂಸಾಚಾರ ಭುಗಿಲೆದ್ದಿರುವುದರಿಂದ ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ.
ಕಿರ್ಕುಕ್ನ ಉತ್ತರಭಾಗದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗ ವಿಫಲವಾದ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಹಿಂಸಾಚಾರಕ್ಕೆ ಹೊಣೆಗಾರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುದಾನಿ ಎಚ್ಚರಿಕೆ ನೀಡಿದ್ದು, ಘರ್ಷಣೆಯ ಬಗ್ಗೆ ತನಿಖೆಗೆ ಆಯೋಗವನ್ನು ರಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಗ್ದಾದ್ನ ಫೆಡರಲ್ ಸರಕಾರ ಮತ್ತು ಉತ್ತರದ ಕುರ್ದಿಸ್ತಾನ್ ಸ್ವಾಯತ್ತ ಪ್ರದೇಶದ ನಡುವೆ ವಿವಾದದ ಕೇಂದ್ರಬಿಂದುವಾಗಿರುವ ಕಿರ್ಕುಕ್ನಲ್ಲಿ ಕಳೆದ ಒಂದು ವಾರದಿಂದ ಉದ್ವಿಗ್ನತೆ ನೆಲೆಸಿದೆ.
ಕಿರ್ಕುಕ್ ನಗರದ ನಿಯಂತ್ರಣವನ್ನು ಕುರ್ದಿಸ್ತಾನ್ ಡೆಮೊಕ್ರಟಿಕ್ ಪಕ್ಷ(ಕೆಡಿಪಿ)ಗೆ ಹಸ್ತಾಂತರಿಸುವಂತೆ ಪ್ರಧಾನಿ ಮುಹಮ್ಮದ್ ಶಿಯಾ ಆದೇಶಿಸಿದ್ದಾರೆ ಎಂಬ ವರದಿಯ ಬಳಿಕ ಅರಬ್ ಮತ್ತು ತುರ್ಕ್ಮನ್ ಸಮುದಾಯದ ಗುಂಪು ಕಿರ್ಕುಕ್ ಪ್ರಾಂತದಲ್ಲಿರುವ ಇರಾಕ್ ಭದ್ರತಾ ಪಡೆಯ ಕೇಂದ್ರ ಕಚೇರಿಯ ಎದುರು ಸೋಮವಾರ ಧರಣಿ ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಈ ಪ್ರದೇಶಕ್ಕೆ ಕುರ್ದಿಷ್ ಪ್ರತಿಭಟನಾಕಾರರು ಶನಿವಾರ ಆಗಮಿಸಿದ್ದು ಎರಡೂ ಗುಂಪುಗಳು ಪ್ರತಿಭಟನೆ ಆರಂಭಿಸಿದ್ದು ಕ್ರಮೇಣ ಘರ್ಷಣೆ ಭುಗಿಲೆದ್ದಿದೆ ಎಂದು ಎಎಫ್ಪಿ ವರದಿ ಮಾಡಿದೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿ ಹೆಚ್ಚುವರಿ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಕಿರ್ಕುಕ್ ಪ್ರಾಂತದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲರೂ ಸಹಕರಿಸುವಂತೆ ಪ್ರಧಾನಿಯವರ ಕಚೇರಿ ಕರೆ ನೀಡಿದೆ.
ಉತ್ತರ ಇರಾಕ್ನಲ್ಲಿರುವ ತೈಲ ಸಮೃದ್ಧ ಕಿರ್ಕುಕ್ ಪ್ರಾಂತವನ್ನು ಕೆಡಿಪಿ ಮತ್ತು ಕುರ್ದಿಸ್ತಾನ್ ವಲಯದ ಭದ್ರತಾ ಪಡೆಗಳು 2014ರಲ್ಲಿ ತಮ್ಮ ನಿಯಂತ್ರಣಕ್ಕೆ ಪಡೆದಿದ್ದವು. ಆದರೆ 2017ರಲ್ಲಿ ಕುರ್ದಿಷ್ ಸ್ವಾತಂತ್ರ್ಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ವಿಫಲವಾದ ಬಳಿಕ ಬಗ್ದಾದ್ನ ಫೆಡರಲ್ ಪಡೆ ಮತ್ತೆ ಕಿರ್ಕುಕ್ ಪ್ರಾಂತವನ್ನು ನಿಯಂತ್ರಣಕ್ಕೆ ಪಡೆದುಕೊಂಡಿದೆ.