ಗಾಝಾದಲ್ಲಿ ಕದನವಿರಾಮ ವಿಸ್ತರಣೆಗೆ ಇಯು ಆಗ್ರಹ
Update: 2023-11-27 16:47 GMT
ಬಾರ್ಸೆಲೋನ: ಮಂಗಳವಾರ ಅಂತ್ಯಗೊಳ್ಳಲಿರುವ ಗಾಝಾ ಕದನ ವಿರಾಮವನ್ನು ವಿಸ್ತರಿಸಬೇಕು ಎಂದು ಯುರೋಪಿಯನ್ ಯೂನಿಯನ್(ಇಯು)ನ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಸೋಮವಾರ ಆಗ್ರಹಿಸಿದ್ದಾರೆ.
ಫೆಲೆಸ್ತೀನಿಯನ್ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ರೂಪಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಗಳು ಸುಸ್ಥಿರ ಮತ್ತು ದೀರ್ಘಕಾಲ ಉಳಿಯುವಂತಾಗಲು ಕದನ ವಿರಾಮ ವಿಸ್ತರಣೆ ಅತ್ಯಗತ್ಯವಾಗಿದೆ ಎಂದು ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ `ಮೆಡಿಟರೇನಿಯನ್ ಕುರಿತಾದ ಅಂತರ್ಸರಕಾರಿ ಸಂಘಟನೆಯ' ಸಭೆಯಲ್ಲಿ ಬೊರೆಲ್ ಹೇಳಿದ್ದಾರೆ.
ಹಿಂಸಾಚಾರದ ಚಕ್ರವನ್ನು ಎಂದೆಂದಿಗೂ ಮುರಿಯಲು ಅವಕಾಶ ನೀಡುವ ರಾಜಕೀಯ ಪರಿಹಾರ ರೂಪಿಸಬೇಕಿದೆ. ಅಕ್ಟೋಬರ್ 7ರಂದು ನಾಗರಿಕರ ವಿರುದ್ಧ ಹಮಾಸ್ ನಡೆಸಿದ ವಿವೇಚನಾರಹಿತ ಕ್ರೌರ್ಯಕ್ಕೆ ಸಮರ್ಥನೆಯಿಲ್ಲ. ಆದರೆ ಒಂದು ಭಯಾನಕ ಕೃತ್ಯವನ್ನು ಮತ್ತೊಂದು ಭಯಾನಕ ಕೃತ್ಯ ಸಮರ್ಥಿಸದು' ಎಂದು ಬೊರೆಲ್ ಹೇಳಿದ್ದಾರೆ.