ರಫಾ ಕಾರ್ಯಾಚರಣೆ ಕೊನೆಗೊಳಿಸುವಂತೆ ಇಸ್ರೇಲ್‌ಗೆ ಯುರೋಪ್ ಒಕ್ಕೂಟ ಆಗ್ರಹ
ಬ್ರುಸೆಲ್ಸ್: ಗಾಝಾದ ರಫಾದಲ್ಲಿ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸುವಂತೆ ಯುರೋಪ್ ಒಕ್ಕೂಟವು ಬುಧವಾರ ಇಸ್ರೇಲನ್ನು ಆಗ್ರಹಿಸಿದ್ದು, ಇದಕ್ಕೆ ತಪ್ಪಿದಲ್ಲಿ ತನ್ನೊಂದಿಗಿನ ಬಾಂಧವ್ಯವನ್ನು ಕಡೆಗಣಿಸಿದಂತಾಗುವುದು ಎಂದು ಎಚ್ಚರಿಕೆ ನೀಡಿದೆ.
‘‘ ರಫಾದಲ್ಲಿ ಸೇನಾ ಕಾರ್ಯಾಚರಣೆಯನ್ನು ಇಸ್ರೇಲ್ ಮುಂದುವರಿಸಿದಲ್ಲಿ,ಅದರಿಂದಾಗಿ ಇಸ್ರೇಲ್ ಜೊತೆಗಿನ ಯುರೋಪ್ ಒಕ್ಕೂಟದ ಬಾಂಧವ್ಯವನ್ನು ಬಿಗಡಾಯಿಸಲಿದೆ’ ಎಂದು ಯುರೋಪ್ ಒಕ್ಕೂಟದ ವಿದೇಶಾಂಗ ನೀತಿ ವರಿಷ್ಠ ಜೋಸೆಫ್ ಬೊರ್ರೆಲ್ ಗುರುವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.
ರಫಾದ ಸುತ್ತಮುತ್ತಲಿನ 5 ಲಕ್ಷಕ್ಕೂ ಅಧಿಕ ಜನರು, ಆ ಪ್ರದೇಶವನ್ನು ತೊರೆದು ವಿಶ್ವಸಂಸ್ಥೆಯು ಅಸುರಕ್ಷಿತವೆಂದು ಹೇಳುತ್ತಿರುವ ಇತರ ವಲಯಗಳಿಗೆ ಪಲಾಯನಗೈಯುವಂತೆ ಇಸ್ರೇಲ್ ಆದೇಶಿಸಿದೆ, ಎಂದು ಫೆಲೆಸ್ತೀನ್ ಪ್ರಾಂತಗಳಿಗೆ ಸಹಾಯಹಸ್ತ ಚಾಚುತ್ತಿರುವವರಲ್ಲಿ ಪ್ರಮುಖ ದೇಶವಾಗಿರುವ ಹಾಗೂ ಇಸ್ರೇಲ್ ಅತಿ ದೊಡ್ಡ ವ್ಯಾಪಾರ ಪಾಲುದಾರನಾದ ಯುರೋಪ್ ಒಕ್ಕೂಟವು ತಿಳಿಸಿದೆ.
ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಯುರೋಪ್ ಒಕ್ಕೂಟವು ಮಾನ್ಯ ಮಾಡುತ್ತದೆ. ಅದೇ ರೀತಿಯ ನಾಗರಿಕರಿಗೆ ಸುರಕ್ಷತೆಯನ್ನು ಒದಗಿಸಲು ಹಾಗೂ ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿ ಇಸ್ರೇಲ್ ವರ್ತಿಸಬೇಕಾಗಿದೆ ಎಂದು ಅದು ಹೇಳಿದೆ.