ಚೀನಾ ಪರ ಬೇಹುಗಾರಿಕೆ | ಸಿಐಎ ಮಾಜಿ ಏಜೆಂಟ್‍ಗೆ 10 ವರ್ಷ ಜೈಲು
ವಾಷಿಂಗ್ಟನ್ : ಚೀನಾ ಸರಕಾರದ ಪರ ಬೇಹುಗಾರಿಕೆ ನಡೆಸುತ್ತಿದ್ದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ)ಯ ಮಾಜಿ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿರುವುದಾಗಿ ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ.
ಅಮೆರಿಕದ ರಹಸ್ಯಗಳನ್ನು ಚೀನಾಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಹೊನೊಲುಲುವಿನ ಅಲೆಕ್ಸಾಂಡರ್ ಯುಕ್ ಚಿಂಗ್ ಮಾ (71 ವರ್ಷ)ನನ್ನು 2020ರ ಆಗಸ್ಟ್‍ನಲ್ಲಿ ಬಂಧಿಸಲಾಗಿತ್ತು. ಚೀನಾದ ಶಾಂಘೈ ರಾಜ್ಯ ಭದ್ರತಾ ಬ್ಯೂರೊ(ಎಸ್‍ಎಸ್‍ಎಸ್‍ಬಿ) ನೇಮಕಗೊಳಿಸಿದ್ದ ಗುಪ್ತಚರ ಅಧಿಕಾರಿಗಳಿಗೆ ವರ್ಗೀಕೃತ ಮಾಹಿತಿಯನ್ನು ಒದಗಿಸಲು ತಾನು ವ್ಯವಸ್ಥೆ ಮಾಡಿರುವುದಾಗಿ ಚಿಂಗ್ ಮಾ ಒಪ್ಪಿಕೊಂಡಿದ್ದರು. ಹಾಂಕಾಂಗ್‍ನಲ್ಲಿ ಜನಿಸಿದ್ದ ಮಾ ಅಮೆರಿಕದ ಪೌರತ್ವ ಪಡೆದಿದ್ದು 1982ರಿಂದ 1989ರವರೆಗೆ ಸಿಐಎ ಪರ ಕೆಲಸ ಮಾಡಿದ್ದರು. ಸಿಐಎಯಲ್ಲಿ ಉದ್ಯೋಗಿಯಾಗಿದ್ದ ತನ್ನ ಸಂಬಂಧಿಯೊಡನೆ ಸೇರಿಕೊಂಡು ಪ್ರಮುಖ ಮಾಹಿತಿಗಳನ್ನು ಚೀನಾ ಸರಕಾರಕ್ಕೆ ಒದಗಿಸಿದ್ದರು ಎಂದು ಆರೋಪಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಚಿಂಗ್ ಮಾಗೆ 10 ವರ್ಷದ ಜೈಲುಶಿಕ್ಷೆ, ಬಿಡುಗಡೆಗೊಂಡ ಬಳಿಕ 5 ವರ್ಷ ನಿಗಾ ವ್ಯವಸ್ಥೆಯಡಿ ಇರಬೇಕೆಂದು ತೀರ್ಪು ನೀಡಿದೆ.