ಗಾಝಾದಲ್ಲಿ 25 ವರ್ಷಗಳ ಬಳಿಕ ಮೊದಲ ಪೋಲಿಯೊ ಪ್ರಕರಣ ಪತ್ತೆ

Update: 2024-08-17 16:36 GMT

ಸಾಂದರ್ಭಿಕ ಚಿತ್ರ

ಗಾಝಾ : ಇಸ್ರೇಲ್‌ನ ಆಕ್ರಮಣದಿಂದ ಜರ್ಝರಿತವಾಗಿರುವ ಗಾಝಾದಲ್ಲಿ ಕಳೆದ 25 ವರ್ಷಗಳಲ್ಲೇ ಮೊದಲ ಬಾರಿಗೆ ಪೋಲಿಯೊ ಪ್ರಕರಣ ವರದಿಯಾಗಿದೆ ಎಂದು ಫೆಲೆಸ್ತೀನ್‌ನ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಪೋಲಿಯೊ ಹಾವಳಿಯ ಭೀತಿ ಎದುರಿಸುತ್ತಿರುವ 6.40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಅವಕಾಶ ಮಾಡಿಕೊಡಲು ಯುದ್ಧವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ವರಿಷ್ಠ ಆಂಟೊನಿಯೊ ಗುಟೆರಸ್ ಅವರು ಇಸ್ರೇಲ್ ಹಾಗೂ ಹಮಾಸ್‌ಗೆ ಕರೆ ನೀಡಿದ್ದ ಬೆನ್ನಲ್ಲೇ ಈ ಪ್ರಕರಣ ವರದಿಯಾಗಿದೆ.

ಮಧ್ಯ ಗಾಝಾಪಟ್ಟಿಯಲ್ಲಿ 10 ತಿಂಗಳು ವಯಸ್ಸಿನ ಲಸಿಕೀಕರಣಗೊಳ್ಳದ ಶಿಶುವಿನಲ್ಲಿ ಪೋಲಿಯೊ ಸೋಂಕು ಪತ್ತೆಯಾಗಿದೆ ಎಂದು ರಮಲ್ಲಾದ ಆರೋಗ್ಯ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ಗಾರ್ಡಿಯನ್’ ಸುದ್ದಿಸಂಸ್ಥೆ ವೆಬ್‌ಸೈಟ್ ವರದಿ ಮಾಡಿದೆ.

ಗಾಝಾದಲ್ಲಿ ಎರಡು ಸುತ್ತುಗಳ ಲಸಿಕೆ ಅಭಿಯಾನವನ್ನು ನಡೆಸುವುದಕ್ಕೆ ಆಸ್ಪದ ಮಾಡಿಕೊಡಲು 7 ದಿನಗಳ ಕಾಲ ಮಾನವೀಯ ಉದ್ದೇಕ್ಕಾಗಿ ಕದನವನ್ನು ನಿಲುಗಡೆಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಓ) ಹಾಗೂ ಯುನಿಸೆಫ್ ಕರೆ ನೀಡಿದೆ.

ಕಳೆದ 25 ವರ್ಷಗಳಿಂದ ಒಂದೇ ಒಂದು ಪೋಲಿಯೊ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಜೂನ್ ತಿಂಗಳಲ್ಲಿ ಗಾಝಾ ಪ್ರದೇಶದ ತ್ಯಾಜ್ಯ ನೀರಿನಲ್ಲಿ ಸಂಗ್ರಹಿಸಲ್ಪಟ್ಟ ಮಾದರಿಗಳಲ್ಲಿ ಟೈಪ್ 2 ಪೋಲಿಯೊ ವೈರಸ್ ಪತ್ತೆಯಾಗಿದೆಯೆಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಗಾಝಾ ಪಟ್ಟಿಯಾದ್ಯಂತ ಆಗಸ್ಟ್ ತಿಂಗಳ ಕೊನೆಯಲ್ಲಿ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಟೈಪ್‌2 ಪೋಲಿಯೊ ನಿರೋಧಕ ಲಸಿಕೀಕರಣಕ್ಕೆ ಎರಡು ಸುತ್ತುಗಳನ್ನು ಆರಂಬಿಸುವ ಯೋಜನೆಯನ್ನು ಡಬ್ಲ್ಯುಎಚ್‌ಓ ಹಾಗೂ ಯುನಿಸೆಫ್ ಹೊಂದಿದೆ.

ಆಸ್ಪತ್ರೆಗಳು, ಕ್ಷೇತ್ರೀಯ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿರುವ ಲಸಿಕೀಕರಣ ಅಭಿಯಾನದಲ್ಲಿ 2700ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ 798 ತಂಡಗಳು ಪಾಲ್ಗೊಳ್ಳಲಿವೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News