ಫೋರ್ಬ್ಸ್ ನ 100 ಶ್ರೀಮಂತ ಮಹಿಳೆಯರ ಪಟ್ಟಿ: ಭಾರತೀಯ ಮೂಲದ ನಾಲ್ವರಿಗೆ ಸ್ಥಾನ
ವಾಷಿಂಗ್ಟನ್: ಅಮೆರಿಕಾದ 100 ಅತೀ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ಮೂಲದ ಸಾಧಕ ಮಹಿಳೆಯರಾದ ಜಯಶ್ರೀ ಉಲ್ಲಾಳ್, ಇಂದಿರಾ ನೂಯಿ, ನೀರಜಾ ಸೇಥಿ ಮತ್ತು ನೇಹಾ ನರ್ಖಡೆ ಸ್ಥಾನ ಪಡೆದಿದ್ದಾರೆ.
ಫೋಬ್ರ್ಸ್ ಬಿಡುಗಡೆಗೊಳಿಸಿರುವ 100 ಅತೀ ಶ್ರೀಮಂತ ಅಮೆರಿಕದ ಮಹಿಳೆಯರ ಪಟ್ಟಿಯಲ್ಲಿ ಸಗಟು ಪೂರೈಕೆ ಸಂಸ್ಥೆ `ಎಬಿಸಿ ಸಪ್ಲೈ'ನ ಸಹಸಂಸ್ಥಾಪಕಿ ಡಯಾನ ಹೆಂಡ್ರಿಕ್ಸ್ 15 ಶತಕೋಟಿ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಗಾಯಕಿ ರಿಹಾನಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಟಿವಿ ಕಾರ್ಯಕ್ರಮಗಳ ನಿರ್ಮಾಪಕಿ ಶೊಂಡಾ ರೈಮ್ಸ್, ಇನ್ಸಿಟ್ರೊ ಸಂಸ್ಥೆಯ ಅಧ್ಯಕ್ಷೆ ಡ್ಯಾಫ್ನೆ ಕೊಯೆಲ್ಲರ್ ಅವರೂ ಈ ಪಟ್ಟಿಯಲ್ಲಿದ್ದು ಈ ನಾಲ್ವರು ಒಟ್ಟು 124 ಶತಕೋಟಿ ಡಾಲರ್ನಷ್ಟು ಸಂಪತ್ತು ಹೊಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 12%ದಷ್ಟು ಹೆಚ್ಚಳವಾಗಿದೆ ಎಂದು ಫೋರ್ಬ್ಸ್ ನ 9ನೇ ವಾರ್ಷಿಕ ವರದಿ ಹೇಳಿದೆ.
ಅರಿಸ್ಟಾ ನೆಟ್ವಕ್ರ್ಸ್ ಎಂಬ ಕಂಪ್ಯೂಟರ್ ನೆಟ್ವರ್ಕಿಂಗ್ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷೆಯಾಗಿರುವ ಜಯಶ್ರೀ ಉಲ್ಲಾಳ್ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದ್ದು ಭಾರತೀಯ ಮೂಲದ ಮಹಿಳೆಯರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2022ರಲ್ಲಿ ಅರಿಸ್ಟಾ ನೆಟ್ವರ್ಕ್ ಸುಮಾರು 4.4 ಶತಕೋಟಿ ಡಾಲರ್ನಷ್ಟು ಆದಾಯ ದಾಖಲಿಸಿದ್ದು ಸಂಸ್ಥೆಯ 2.4% ಶೇರುಗಳನ್ನು ಜಯಶ್ರೀ ಹೊಂದಿದ್ದಾರೆ.
ಐಟಿ ಸಲಹೆ ಮತ್ತು ಹೊರಗುತ್ತಿಗೆ ನಿರ್ವಹಿಸುವ `ಸಿಂಟೆಲ್' ಸಂಸ್ಥೆಯ ಸಹಸಂಸ್ಥಾಪಕಿ ನೀರಜಾ ಸೇಥಿ ಈ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದ್ದಾರೆ. ನೀರಜಾ ಅವರು 990 ದಶಲಕ್ಷ ಡಾಲರ್ ನಿವ್ವಳ ಆದಾಯ ಹೊಂದಿದ್ದಾರೆ. ದಿಲ್ಲಿ ವಿವಿಯಲ್ಲಿ ಎಂಬಿಎ ಪದವಿ ಪಡೆದಿರುವ ನೀರಜಾ ಓಕ್ಲಾಂಡ್ ವಿವಿಯಿಂದ ಮಾಸ್ಟರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ.
ವಂಚನೆ ಪತ್ತೆಹಚ್ಚುವ `ಆಸಿಲರ್' ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ನೇಹಾ ನರ್ಖಡೆ `ಒಸಿಲಿಯೆ' ಎಂಬ ಸಂಸ್ಥೆಯ ಸಿಇಒ ಕೂಡಾ ಆಗಿದ್ದಾರೆ. ಪಟ್ಟಿಯಲ್ಲಿ 50ನೇ ಸ್ಥಾನದಲ್ಲಿರುವ ಇವರ ನಿವ್ವಳ ಸಂಪತ್ತು 520 ದಶಲಕ್ಷ ಡಾಲರ್.
ಪೆಪ್ಸಿಕೋ ಸಂಸ್ಥೆಯ ಮಾಜಿ ಅಧ್ಯಕ್ಷೆ ಮತ್ತು ಸಿಇಒ ಆಗಿರುವ ಇಂದಿರಾ ನೂಯಿ 24 ವರ್ಷ ಸೇವೆ ಸಲ್ಲಿಸಿದ ಬಳಿಕ 2019ರಲ್ಲಿ ನಿವೃತ್ತರಾಗಿದ್ದಾರೆ. 77ನೇ ಸ್ಥಾನದಲ್ಲಿರುವ ಇವರ ನಿವ್ವಳ ಸಂಪತ್ತು 350 ದಶಲಕ್ಷ ಡಾಲರ್ ಆಗಿದೆ ಎಂದು ವರದಿ ಹೇಳಿದೆ.