ಬಲವಂತದ ಸ್ಥಳಾಂತರ ಕಾನೂನುಬಾಹಿರ ಕ್ರಮ: ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ

Update: 2023-10-14 18:18 GMT

ನ್ಯೂಯಾರ್ಕ್ ಸಿಟಿ: ಉತ್ತರ ಗಾಝಾದಿಂದ ದಕ್ಷಿಣದ ಪ್ರದೇಶಕ್ಕೆ 24 ಗಂಟೆಯೊಳಗೆ ಸ್ಥಳಾಂತರಗೊಳ್ಳುವಂತೆ 1.2 ದಶಲಕ್ಷಕ್ಕೂ ಅಧಿಕ ಫೆಲೆಸ್ತೀನೀಯರಿಗೆ ಇಸ್ರೇಲ್ ಶುಕ್ರವಾರ ನೀಡಿದ ಗಡುವನ್ನು ತಕ್ಷಣ ಹಿಂಪಡೆಯುವಂತೆ ಮಾನವೀಯ ನೆರವಿನ ಸಂಸ್ಥೆಗಳು ಆಗ್ರಹಿಸಿವೆ.

ಇಸ್ರೇಲ್ ನ ಈ ಕ್ರಮ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ನಾಗರಿಕರಿಗೆ ವಿಧಿಸುವ ಸಾಮೂಹಿಕ ಶಿಕ್ಷೆಯಾಗಿದ್ದು ಇದು ಅಂತರಾಷ್ಟ್ರೀಯ ಕಾನೂನಿಡಿ ಕಾನೂನುಬಾಹಿರವಾಗಿದೆ. ಜನಸಮುದಾಯದ ಬಲವಂತದ ಸ್ಥಳಾಂತರವು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ‘ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಮಾನವ ಹಕ್ಕುಗಳಿಗೆ ಸಂಬಂಧಿಸಿದ’ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಪೌಲಾ ಗ್ಯವೀರಿಯಾ ಬೆಟಾಂಕರ್ ಖಂಡಿಸಿದ್ದಾರೆ.

ಈ ಮಧ್ಯೆ, ಗಾಝಾ ನಿವಾಸಿಗಳಿಗೆ ತುರ್ತು ಅಗತ್ಯದ ವಸ್ತುಗಳನ್ನು ಪೂರೈಸಲು ಮಾನವೀಯ ಕಾರಿಡಾರ್ ಸ್ಥಾಪನೆಗೆ ವಿಶ್ವ ಆರೋಗ್ಯ ಸಂಘಟನೆ ಕರೆನೀಡಿದೆ. ಆಸ್ಪತ್ರೆಗಳು ವಿದ್ಯುತ್ ಅಥವಾ ಇಂಧನಗಳಿಲ್ಲದೆ ಕಾರ್ಯ ನಿರ್ವಹಿಸಲು ಸಾಧ್ಯವಾಗದು. ಗಾಝಾದ ವಿದ್ಯುತ್ ಸ್ಥಾವರ ಇಂಧನದ ಕೊರತೆಯಿಂದ ಸ್ಥಗಿತಗೊಂಡಿದೆ. ಆ ಪ್ರದೇಶದಲ್ಲಿರುವ 6,50,000ಕ್ಕೂ ಅಧಿಕ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ.

ತೀವ್ರ ಸಂಘರ್ಷ ನಡೆಯುತ್ತಿರುವ ಯುದ್ಧವಲಯದ ಮೂಲಕ 1 ದಶಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವುದು, ಅದೂ ದಿಗ್ಬಂಧನದ ಅಡಿಯಲ್ಲಿ, ತೀವ್ರ ಅಪಾಯಕಾರಿ ಮತ್ತು ಅಸಾಧ್ಯ ಕ್ರಮವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ. ‘ಯುದ್ಧಕ್ಕೂ ನಿಯಮಗಳಿವೆ. ಸಂಘರ್ಷದಲ್ಲಿ ನಿರತರಾಗಿರುವವರು ಅಂತರಾಷ್ಟ್ರೀಯ ಮಾನವೀಯ ನಿಯಮ, ಮಾನವ ಹಕ್ಕುಗಳ ನಿಯಮಗಳನ್ನು ಗೌರವಿಸಬೇಕು. ನಾಗರಿಕರನ್ನು ರಕ್ಷಿಸಬೇಕು, ಅವರನ್ನು ಇದಿರಾಳಿಗಳ ದಾಳಿಗೆ ಗುರಾಣಿಯಂತೆ ಬಳಸಬಾರದು’ ಎಂದು ಗುಟೆರಸ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News