ಅಮೆರಿಕಕ್ಕೆ ಅಕ್ರಮ ಪ್ರವೇಶಿಸಲು ಯತ್ನ: ಮೂವರು ಭಾರತೀಯರ ಬಂಧನ
ವಾಷಿಂಗ್ಟನ್: ಕೆನಡಾದ ಸರಕು ರೈಲಿನಲ್ಲಿ ರಹಸ್ಯವಾಗಿ ಪ್ರಯಾಣಿಸಿ ಅಮೆರಿಕದ ಗಡಿಭಾಗದಲ್ಲಿ ನೆಲಕ್ಕೆ ಹಾರಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ಮೂವರು ಭಾರತೀಯರ ಸಹಿತ 4 ಮಂದಿಯನ್ನು ಅಮೆರಿಕದ ಗಡಿ ಗಸ್ತು ಪಡೆ ಬಂಧಿಸಿರುವುದಾಗಿ ವರದಿಯಾಗಿದೆ.
ಕೆನಡಾದಿಂದ ಆಗಮಿಸಿದ ಸರಕು ರೈಲು ನ್ಯೂಯಾರ್ಕ್ನ ಬಫೆಲೊ ನಗರದ ಅಂತರಾಷ್ಟ್ರೀಯ ರೈಲು-ರಸ್ತೆ ಸೇತುವೆಯಲ್ಲಿ ವೇಗ ಕಡಿಮೆಗೊಳಿಸುದ್ದಂತೆಯೇ ಮಹಿಳೆ ಸೇರಿದಂತೆ 4 ಮಂದಿ ನೆಲಕ್ಕೆ ಜಿಗಿದಿದ್ದರು. ಆದರೆ ಈ ಸಂದರ್ಭ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಕೆಯನ್ನು ಅಲ್ಲಿಯೇ ಬಿಟ್ಟು ಉಳಿದ ಮೂವರು ಪರಾರಿಯಾಗಿದ್ದರು. ಮಹಿಳೆಯನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಪರಾರಿಯಾಗಿದ್ದ ಮೂವರನ್ನೂ ಬಂಧಿಸಲಾಗಿದೆ. ಮಹಿಳೆ ಹಾಗೂ ಇಬ್ಬರು ಪುರುಷರು ಭಾರತೀಯರಾಗಿದ್ದರೆ ಮತ್ತೊಬ್ಬ ವ್ಯಕ್ತಿ ಡೊಮಿನಿಕನ್ ಗಣರಾಜ್ಯದ ಪ್ರಜೆ. ಈ ನಾಲ್ಕು ಮಂದಿಯ ಬಳಿ ಅಗತ್ಯವಿರುವ ದಾಖಲೆ ಪತ್ರಗಳಿರಲಿಲ್ಲ. ಇವರನ್ನು ನ್ಯೂಯಾರ್ಕ್ನ ಬಟಾವಿಯಾ ಫೆಡರಲ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದ್ದು ಗಡೀಪಾರು ಆದೇಶಕ್ಕೆ ಕಾಯಲಾಗುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.