ಚಾಡ್‍ನಿಂದ ಫ್ರಾನ್ಸ್ ಮಿಲಿಟರಿ ಪಡೆ ವಾಪಸಾತಿಗೆ ಚಾಲನೆ
ಪ್ಯಾರಿಸ್ : ಮಧ್ಯ ಆಫ್ರಿಕಾದ ಚಾಡ್ ದೇಶದ ರಾಜಧಾನಿಯಿಂದ ಎರಡು ಯುದ್ಧವಿಮಾನಗಳು ಹಾಗೂ ಟ್ಯಾಂಕರ್ ವಿಮಾನದ ನಿರ್ಗಮನದೊಂದಿಗೆ ತನ್ನ ಮಿಲಿಟರಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಫ್ರಾನ್ಸ್ ಚಾಲನೆ ನೀಡಿರುವುದಾಗಿ ವರದಿಯಾಗಿದೆ.
ಕೊಸ್ಸೆಯ್ ವಾಯುನೆಲೆಯಲ್ಲಿ ತನ್ನ ಯುದ್ಧವಿಮಾನಗಳ ನಿಯೋಜನೆಗೆ ಫ್ರಾನ್ಸ್ ಅಂತ್ಯಹೇಳಿದೆ ಎಂದು ಫ್ರಾನ್ಸ್ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸರಣಿ ಮಿಲಿಟರಿ ದಂಗೆಯ ಬಳಿಕ ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್‍ನಿಂದ ತನ್ನ ಪಡೆಗಳನ್ನು ಫ್ರಾನ್ಸ್ ಅನಿವಾರ್ಯವಾಗಿ ಹಿಂದಕ್ಕೆ ಪಡೆದ ಬಳಿಕ ಆಫ್ರಿಕಾದಲ್ಲಿ ಫ್ರಾನ್ಸ್ ನ ಮಿಲಿಟರಿ ಉಪಸ್ಥಿತಿಯಲ್ಲಿ ಚಾಡ್ ಪ್ರಮುಖ ಕೊಂಡಿಯಾಗಿತ್ತು.
ನವೆಂಬರ್ 28ರಂದು ಫ್ರಾನ್ಸ್ ನ ವಿದೇಶಾಂಗ ಸಚಿವ ಜೀನ್ ನೊಯೆಲ್ ಬ್ಯಾರೊಟ್ ಭೇಟಿ ನೀಡಿದ ಬಳಿಕ, ಚಾಡ್ ದೇಶದ ಅಧಿಕಾರಿಗಳು 1960ರಲ್ಲಿ ವಸಾಹತುಶಾಹಿ ಯುಗದ ಅಂತ್ಯದಿಂದ ಫ್ರಾನ್ಸ್‍ನೊಂದಿಗೆ ಮಾಡಿಕೊಂಡಿದ್ದ ಭದ್ರತೆ ಮತ್ತು ರಕ್ಷಣಾ ಒಪ್ಪಂದಗಳಿಗೆ ಅಂತ್ಯವನ್ನು ಘೋಷಿಸಿದ್ದರು.