ಫ್ರಾನ್ಸ್ ಪ್ರಧಾನಿ ರಾಜೀನಾಮೆ
Update: 2024-01-09 17:36 GMT
ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ಸಂಪುಟ ಪುನರ್ರಚನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಎಲಿಜಾಬೆತ್ ಬೋರ್ನ್ ಪದತ್ಯಾಗ ಮಾಡಿರುವುದಾಗಿ ವರದಿಯಾಗಿದೆ.
ಪ್ರಧಾನಿ ಎಲಿಜಾಬೆತ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಅದನ್ನು ಅಧ್ಯಕ್ಷರು ಅಂಗೀಕರಿಸಿದ್ದಾರೆ. ಹೊಸ ಸರಕಾರ ರಚನೆಯಾಗುವವರೆಗೆ ಅವರು ಹಾಗೂ ಇತರ ಸಚಿವರು ದೈನಂದಿನ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಶಿಕ್ಷಣ ಸಚಿವ ಗ್ಯಾಬ್ರಿಯೆಲ್ ಅಟ್ಟಲ್ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ. ಇದರೊಂದಿಗೆ 34 ವರ್ಷದ ಗ್ಯಾಬ್ರಿಯಲ್ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಆಂತರಿಕ ಸಚಿವ ಜೆರಾಲ್ಡ್ ಡರ್ಮಾನಿನ್, ವಿದೇಶಾಂಗ ಸಚಿವೆ ಕ್ಯಾಥರಿನ್ ಕೊಲೋನ, ವಿತ್ತ ಸಚಿವ ಬ್ರೂನೊ ಲೆಮಾರಿ ಅವರನ್ನೂ ಬದಲಾಯಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.