ಒಲಿಂಪಿಕ್ಸ್ 2024ಗೆ ಕ್ಷಣಗಣನೆ ನಡುವೆ ಫ್ರಾನ್ಸ್‌ನಾದ್ಯಂತ ರೈಲ್ವೆ ಸ್ವತ್ತುಗಳ ಮೇಲೆ ಸಂಘಟಿತ ದಾಳಿ
ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ 2024 ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿರುವ ನಡುವೆಯೇ ಫ್ರಾನ್ಸ್‌ನಾದ್ಯಂತ ರೈಲ್ವೆ ವ್ಯವಸ್ಥೆ ಮೇಲೆ ಸಂಘಟಿತ ದಾಳಿ ನಡೆಸಲಾಗಿದೆ. ಹಲವು ಕಡೆಗಳಲ್ಲಿ ರೈಲ್ವೆ ಸ್ವತ್ತುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದ್ದು ಇದರಿಂದ ದೇಶಾದ್ಯಂತ ರೈಲು ಸೇವೆಗಳಲ್ಲಿ ವ್ಯತ್ಯಯವುಂಟಾಗಿ ಸುಮಾರು 8 ಲಕ್ಷ ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದಾರೆ.
ರೈಲು ಪ್ರಯಾಣ ಮುಂದೂಡುವಂತೆ ಪ್ರಯಾಣಿಕರಿಗೆ ಸರ್ಕಾರ ಸೂಚಿಸಿದೆ. ರೈಲ್ವೆ ಸ್ವತ್ತುಗಳ ಮೇಲೆ ನಡೆದಿರುವ ಈ ಸಂಘಟಿತ ದಾಳಿಯು ಒಂದು ಪೂರ್ವನಿಯೋಜಿತ ವಿಧ್ವಂಸಕ ಕೃತ್ಯ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.
ದೇಶದ ಟಿವಿಜಿ ರೈಲ್ವೆ ಜಾಲದ ಹಲವೆಡೆ ಬೆಂಕಿ ಹಚ್ಚಲಾಗಿದೆ. ಈ ವಿಧ್ವಂಸಕ ಕೃತ್ಯದ ಹೊಣೆಯನ್ನು ಇಲ್ಲಿಯವರೆಗೂ ಯಾರೂ ಹೊತ್ತುಕೊಂಡಿಲ್ಲ. ಈ ದಾಳಿಯ ಹಿಂದೆ ಯಾರಿದ್ದಾರೆಂದು ತಿಳಿಯಲು ಫ್ರಾನ್ಸ್‌ನ ಗುಪ್ತಚರ ಸೇವೆಗಳು ಕೆಲಸ ಆರಂಭಿಸಿವೆ ಎಂದು ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಹೇಳಿದ್ದಾರೆ.
ಇದೊಂದು ಬೃಹತ್ ದಾಳಿ ಹಾಗೂ ಕ್ರಿಮಿನಲ್ ಕೃತ್ಯ ಎಂದು ಸಾರಿಗೆ ಸಚಿವ ಪೇಟ್ರಿಸ್ ವರ್ಗ್ರಿಯಟ್ ಹೇಳಿದ್ದಾರೆ.
ಹಾನಿಗೀಡಾದ ಸ್ಥಳಗಳಲ್ಲಿ ದುರಸ್ತಿ ಕೆಲಸ ಪೂರ್ಣಗೊಳ್ಳುವವರಿಗೆ ಹಲವು ಮಾರ್ಗಗಳಲ್ಲಿ ರೈಲು ಸೇವೆಗಳು ರದ್ದಾಗಲಿವೆ ಎಂದು ತಿಳಿದು ಬಂದಿದೆ.