ಗಾಝಾ | ಇಸ್ರೇಲ್ ದಾಳಿಯಲ್ಲಿ 16 ಮಂದಿ ಮೃತ್ಯು

Update: 2024-07-22 16:32 GMT

PC : NDTV 

ಗಾಝಾ : ಗಾಝಾಪಟ್ಟಿಯ ಖಾನ್ ಯೂನಿಸ್ ನಗರದ ಬಳಿ ಸೋಮವಾರ ಇಸ್ರೇಲ್ ಟ್ಯಾಂಕ್‍ನ ಶೆಲ್ ದಾಳಿ ಹಾಗೂ ವೈಮಾನಿಕ ದಾಳಿಯಲ್ಲಿ ಕನಿಷ್ಟ 16 ಮಂದಿ ಮೃತಪಟ್ಟಿರುವುದಾಗಿ ಗಾಝಾದ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಗಾಝಾದ ಕೆಲವು ಪ್ರದೇಶಗಳ ಮೇಲೆ ಮತ್ತೆ ದಾಳಿ ನಡೆಸಬೇಕಿರುವುದರಿಂದ ಅಲ್ಲಿನ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನೆ ಸೂಚಿಸಿದೆ. ಯುದ್ಧ ವಲಯದಿಂದ ನಾಗರಿಕರ ಸ್ಥಳಾಂತರಕ್ಕೆ ಅನುಕೂಲ ಮಾಡಿಕೊಡಲು ಅಲ್-ಮವಾಸಿಯಲ್ಲಿ ಮಾನವೀಯ ವಲಯದ ಗಡಿಗಳನ್ನು ಸರಿಹೊಂದಿಸಲಾಗುತ್ತಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಗಾಝಾದ ಖಾನ್ ಯೂನಿಸ್‍ನ ಪೂರ್ವದಲ್ಲಿರುವ ಬನಿ ಸುಹೈಲಾ ಪಟ್ಟಣದಲ್ಲಿ ಇಸ್ರೇಲ್ ಟ್ಯಾಂಕ್‍ಗಳ ಶೆಲ್‍ದಾಳಿ ಮತ್ತು ಯುದ್ಧವಿಮಾನಗಳ ಬಾಂಬ್ ದಾಳಿಯಲ್ಲಿ 6 ಮಕ್ಕಳು, 4 ಮಹಿಳೆಯರ ಸಹಿತ ಕನಿಷ್ಟ 16 ಫೆಲೆಸ್ತೀನೀಯರು ಮೃತಪಟ್ಟಿದ್ದು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಝಾ ಪಟ್ಟಿಯ ಅಲ್-ಬುರೇಜ್‍ನಲ್ಲಿ ಎರಡು ಮನೆಗಳನ್ನು ಗುರಿಯಾಗಿಸಿ ನಡೆದ ಕ್ಷಿಪಣಿ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಝಾ ನಗರದ ಜನನಿಬಿಡ ಪ್ರದೇಶದ ಮೇಲೆ ನಡೆದ ಬಾಂಬ್‍ದಾಳಿಯಲ್ಲಿ ಇಬ್ಬರು ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ಈ ಮಧ್ಯೆ, ಗಾಯಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದರಿಂದ ರಕ್ತದ ಕೊರತೆಯಾಗಿದೆ ಎಂದು ಖಾನ್ ಯೂನಿಸ್‍ನ ನಾಸೆರ್ ಆಸ್ಪತ್ರೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News