ಗಾಝಾ | ಶಾಲಾ ಕಟ್ಟಡದ ಮೇಲೆ ಇಸ್ರೇಲ್ ಬಾಂಬ್ ದಾಳಿ ಕನಿಷ್ಠ 28 ಮಂದಿ ಮೃತ್ಯು

Update: 2024-10-10 16:55 GMT

ಸಾಂದರ್ಭಿಕ ಚಿತ್ರ | PC : PTI

ಗಾಝಾ : ಯುದ್ಧಪೀಡಿತ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ ಮುಂದುವರಿದಿದೆ. ಗುರುವಾರ ಶಾಲೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆಂದು ವೈದ್ಯಕೀಯ ಸೇವಾಸಂಸ್ಥೆ ಫೆಲೆಸ್ತೀನ್ ರೆಡ್‌ಕ್ರಿಸೆಂಟ್ ತಿಳಿಸಿದೆ. ಆದರೆ ಇಸ್ರೇಲ್ ದಾಳಿಯನ್ನು ಸಮರ್ಥಿಸಿಕೊಂಡಿದೆ. ಹಮಾಸ್‌ನ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿ ತಾನು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ರಫಿದಾ ಶಾಲೆಯನ್ನು ಗುರಿಯಾಗಿಸಿ ಇಸ್ರೇಲ್ ಸೇನೆಯು ಈ ಆಕ್ರಮಣವನ್ನು ನಡೆಸಿರುವುದಾಗಿ ಫೆಲೆಸ್ತೀನ್ ರೆಡ್‌ಕ್ರಿಸೆಂಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.ಆದರೆ ಇಸ್ರೇಲ್ ಸೇನೆಯು ಇದನ್ನು ಅಲ್ಲಗಳೆದಿದೆ. ಹಿಂದೆ ರಫಿದಾ ಶಾಲೆ ಇದ್ದ ಕಟ್ಟಡದ ಆವರಣವು ಫೆಲೆಸ್ತೀನ್ ಹೋರಾಟಗಾರರ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವಾಗಿ ಬಳಕೆಯಾಗುತ್ತಿತ್ತು. ಈ ಕೇಂದ್ರವನ್ನು ಅವರು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಯ ಯೋಧರು ಹಾಗೂ ಇಸ್ರೇಲ್ ಮೇಲೆ ಭಯೋತಾದಕ ದಾಳಿಗಳನ್ನು ನಡೆಸಲು ಬಳಸುತ್ತಿದ್ದರರೆಂದು ಅದು ಹೇಳಿದೆ.

ಇಸ್ರೇಲ್‌ನ ದಾಳಿಗೆ ಬಲಿಯಾದವರ ಮೃತದೇಹಗಳನ್ನು ಗಾಝಾದ ಅಲ್ ಅಕ್ಸಾ ಹುತಾತ್ಮರ ಆಸ್ಪತ್ರೆಗೆ ತರಲಾಗಿದೆ. ಮೃತಪಟ್ಟವರಲ್ಲಿ 8 ಮಂದಿ ಮಹಿಳೆಯರು ಹಾಗೂ ಒಂದು ಮಗು ಕೂಡಾ ಸೇರಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿರುವುದಾಗಿಯೂ ವರದಿಗಳು ತಿಳಿಸಿವೆ.

ಅಲ್ ಅಕ್ಸಾ ಆಸ್ಪತ್ರೆಯಲ್ಲಿ ಕಂಡುಬಂದ ದೃಶ್ಯ ಭೀಭತ್ಸವಾಗಿತ್ತೆಂದರೆ, ತರಲಾದ ಮೃತದೇಹಗಳಲ್ಲಿ ಹೆಚ್ಚಿನವು ಗುರುತೇ ಸಿಗದ ರೀತಿಯಲ್ಲಿ ಛಿದ್ರಗೊಂಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಾಲಾ ಪ್ರಬಂಧಕರು ಕೊಠಡಿಯೊಂದರಲ್ಲಿ ನೆರವು ಸಂಸ್ಥೆಯ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾಗ ಈ ದಾಳಿ ನಡೆಸಲಾಗಿತ್ತೆನ್ನಲಾಗಿದೆ.

ಕಳೆದ ಒಂದು ವರ್ಷದಿಂದ ಭುಗಿಲೆದ್ದಿರುವ ಗಾಝಾ ಸಮರದಲ್ಲಿ ನಿರಾಶ್ರಿತರಾದ ಸಾವಿರಾರು ಜನರು ಆಶ್ರಯ ಪಡೆದಿರುವ ಶಾಲಾ ಕಟ್ಟಡಗಳ ಮೇಲೆ ಇಸ್ರೇಲ್ ಸರಣಿ ಬಾಂಬ್ ದಾಳಿಗಳನ್ನು ನಡೆಸುತ್ತಿದೆ.

ಸೆಪ್ಟೆಂಬರ್ 15ರಂದು ಫೆಲೆಸ್ತೀನ್ ನಿರಾಶ್ರಿತರಿಗೆ ಆಶ್ರಯ ನೀಡಿದ್ದ ಉತ್ತರ ಗಾಝಾದ ಜಬಾಲಿಯಾದ ಶಾಲೆಯೊಂದ ಮೇಲೆ ಇಸ್ರೇಲ್‌ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದರು

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News