ಗಾಝಾ ಕದನ ವಿರಾಮ ಮಾತುಕತೆ ಮುಂದುವರಿಯಲಿದೆ : ಅಮೆರಿಕ

Update: 2024-08-26 15:48 GMT

ಸಾಂದರ್ಭಿಕ ಚಿತ್ರ (PTI)

ಕೈರೊ : ಗಾಝಾದಲ್ಲಿ ಕದನ ವಿರಾಮ ಕುರಿತು ಈಜಿಪ್ಟ್‍ ನ ಕೈರೋದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಸಹಮತ ಮೂಡಿಲ್ಲ. ಮಧ್ಯಸ್ಥಿಕೆದಾರರು ಮುಂದಿರಿಸಿದ ಹಲವು ಹೊಂದಾಣಿಕೆಗಳನ್ನು ಎರಡೂ ಕಡೆಯವರು ಒಪ್ಪಿಕೊಳ್ಳಲಿಲ್ಲ ಎಂದು ವರದಿಯಾಗಿದೆ.

ಆದರೆ, ಕೈರೋದಲ್ಲಿ ನಡೆದ ಮಾತುಕತೆ ರಚನಾತ್ಮಕವಾಗಿದ್ದು ಅಂತಿಮ ಮತ್ತು ಕಾರ್ಯಗತಗೊಳಿಸಬಹುದಾದ ಒಪ್ಪಂದವನ್ನು ತಲುಪಲು ಎಲ್ಲಾ ಕಡೆಯವರೂ ಉತ್ಸಾಹ ತೋರಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉಳಿದ ಸಮಸ್ಯೆ ಮತ್ತು ವಿಷಯಗಳನ್ನು ಪರಿಹರಿಸಲು ಮುಂದಿನ ದಿನಗಳಲ್ಲಿ ಸಂಧಾನ ಪ್ರಕ್ರಿಯೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ.

ಅಮೆರಿಕ, ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯಲ್ಲಿ ವಿವಾದದ ಪ್ರಮುಖ ಅಂಶಗಳಲ್ಲಿ ಫಿಲಡೆಲ್ಫಿ ಕಾರಿಡಾರ್ ನಲ್ಲಿ ಇಸ್ರೇಲ್ ಸೇನೆಯ ಉಪಸ್ಥಿತಿಯ ವಿಷಯವೂ ಸೇರಿದೆ. ಇಲ್ಲಿ ಇಸ್ರೇಲ್ ಸೇನೆಯ ಉಪಸ್ಥಿತಿಯನ್ನು ಹಮಾಸ್ ಮತ್ತು ಈಜಿಪ್ಟ್ ವಿರೋಧಿಸುತ್ತಿದೆ. ಆದರೆ ಗಾಝಾ ಪಟ್ಟಿಯ ಆಯಕಟ್ಟಿನ ಸ್ಥಳದಲ್ಲಿರುವ ಫಿಲಡೆಲ್ಫಿ ಕಾರಿಡಾರ್ ನ ನಿಯಂತ್ರಣ ಬಿಟ್ಟುಕೊಡಲು ಇಸ್ರೇಲ್ ನಿರಾಕರಿಸುತ್ತಿದೆ. ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವುದಕ್ಕೆ ಪ್ರತಿಯಾಗಿ ಇಸ್ರೇಲ್ ಬಿಡುಗಡೆಗೊಳಿಸುವ ಫೆಲಸ್ತೀನ್ ಕೈದಿಗಳು ಗಾಝಾ ಬಿಟ್ಟು ಹೋಗಬೇಕು ಎಂಬುದು ಇಸ್ರೇಲ್ನದ ಮತ್ತೊಂದು ಷರತ್ತು. ಈ ಹಿಂದೆ ಫಿಲಡೆಲ್ಫಿ ಕಾರಿಡಾರ್ ನಿಂದ ಸೇನೆ ಹಿಂಪಡೆಯಲು ಸಮ್ಮತಿಸಿದ್ದ ಇಸ್ರೇಲ್ ಇದೀಗ ಹೊಸ ಷರತ್ತನ್ನು ಮುಂದಿರಿಸುತ್ತಿದೆ. ಜುಲೈ 2ರಂದು ನಡೆದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳಿಗೆ ಹೊಸ ಷರತ್ತು ಸೇರ್ಪಡೆಯಾಗುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹಮಾಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News