ಗಾಝಾ: ವಿದ್ಯುತ್ ಪೂರೈಕೆ ಸ್ಥಗಿತ ಭೀತಿ; ನವಜಾತ ಶಿಶುಗಳ ರಕ್ಷಣೆಗೆ ಹರಸಾಹಸ

Update: 2023-11-14 05:31 GMT

Photo: twitter

ಗಾಝಾ: ಯುದ್ಧಪೀಡಿತ ಗಾಝಾ ಪ್ರದೇಶದ ಅಲ್ ಶಿಫಾ ಆಸ್ಪತ್ರೆಯಲ್ಲಿ ಹಸಿರು ಬಟ್ಟೆಯಿಂದ ಸುತ್ತಲ್ಪಟ್ಟ ನವಜಾತ ಶಿಶುಗಳನ್ನು ಬೆಚ್ಚಗಿಡುವ ಪ್ರಯತ್ನ ನಡೆದಿದ್ದು, ಆಸ್ಪತ್ರೆಗೆ ವಿದ್ಯುತ್ ಪೂರೈಕೆ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ಪುಟ್ಟ ಮಕ್ಕಳ ರಕ್ಷಣೆಗೆ ಹರಸಾಹಸ ನಡೆದಿದೆ.

ಪ್ರತಿ ನಿಮಿಷ ಕಳೆದಂತೆಲ್ಲ ಈ ಕಂದಮ್ಮಗಳ ಜೀವಕ್ಕೆ ಅಪಾಯದ ಸ್ಥಿತಿ ಉಲ್ಬಣಿಸುತ್ತಲೇ ಇದೆ. ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲಿ ಸೇನೆಯ ಯುದ್ಧ ಟ್ಯಾಂಕರ್ಗಳ ದಾಳಿಯಿಂದಾಗಿ ಆಸ್ಪತ್ರೆಗೆ ವಿದ್ಯುತ್, ನೀರು, ಆಹಾರ ಮತ್ತು ವೈದ್ಯಕೀಯ ಸಾಧನಗಳ ಲಭ್ಯತೆಯ ಕೊರತೆ ತೀವ್ರವಾಗಿದೆ. "ನಿನ್ನೆ 39 ಇದ್ದ ನವಜಾತ ಶಿಶುಗಳ ಸಂಖ್ಯೆ ಇಂದು 36ಕ್ಕೆ ಇಳಿದಿದೆ" ಎಂದು ಅಲ್ ಶಿಫಾ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ತಬಶಾ ಹೇಳಿದ್ದಾರೆ.

"ಅವರು ಎಷ್ಟು ಕಾಲ ಉಳಿಯುತ್ತಾರೆ ಎಂದು ನಾನು ಹೇಳಲಾರೆ. ಇಂದು ಕೇವಲ ಒಂದು ಗಂಟೆಯಲ್ಲಿ ಮತ್ತೆರಡು ಶಿಶುಗಳನ್ನು ಇಂದು ನಾವು ಕಳೆದುಕೊಳ್ಳಬೇಕಾಯಿತು" ಎಂದು ಅವರು ವಿಷಾದಿಸಿದರು. ಅವಧಿಪೂರ್ವ ಪ್ರಸವದಿಂದ ಜನಿಸಿದ ಮಕ್ಕಳು 1.5 ಕೆಜಿ ಮಾತ್ರ ಇದ್ದು, 700-800 ಗ್ರಾಂ ತೂಕದ ಶಿಶುಗಳೂ ಇಲ್ಲಿ ಇನ್ಕ್ಯುಬೇಟರ್ ನಲ್ಲಿ ಇವೆ. ವಾಸ್ತವವಾಗಿ ಇಂಥ ಇನ್ಕ್ಯುಬೇಟರ್ ಗಳಲ್ಲಿ ಮಕ್ಕಳಿಗೆ ವೈಯಕ್ತಿಕವಾಗಿ ಅಗತ್ಯವಿರುವ ತಾಪಮಾನ ಮತ್ತು ತೇವಾಂಶವನ್ನು ನಿರ್ವಹಿಸಲಾಗುತ್ತದೆ.

ಅದರೆ ಇಂದು ವಾರಾಂತ್ಯದ ಸಂದರ್ಭದಲ್ಲಿ ವಿದ್ಯುತ್ ಕೊರತೆಯಿಂದಾಗಿ ಈ ಮಕ್ಕಳನ್ನು ಸಾಮಾನ್ಯ ಬೆಡ್ ಗಳಿಗೆ ಸ್ಥಳಾಂತರಿಸಲಾಗಿದೆ. ನ್ಯಾಪ್ಕಿನ್ ಸುತ್ತಿ ಅಕ್ಕಪಕ್ಕದಲ್ಲಿ ಕಾರ್ಡ್ ಬೋರ್ಡ್ ಪೆಟ್ಟಿಗೆ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಸುತ್ತಿ ಬೆಚ್ಚಗಿಡುವ ಪ್ರಯತ್ನ ನಡೆದಿದೆ ಎಂದು ಅವರು ವಿವರಿಸಿದ್ದಾರೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 39 ಶಿಶುಗಳು ಒಂದೇ ಬೆಡ್ ನಲ್ಲಿ ಅಕ್ಕಪಕ್ಕದಲ್ಲಿ ಮಲಗಿರುವ ದೃಶ್ಯವನ್ನು ನಾನು ಜೀವನದಲ್ಲಿ ಹಿಂದೆಂದೂ ಕಂಡಿಲ್ಲ. ಜತೆಗೆ ವೈದ್ಯಕೀಯ ಸಿಬ್ಬಂದಿ, ಹಾಲಿನ ಕೊರತೆ ಕೂಡಾ ವ್ಯಾಪಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನವಜಾತ ಶಿಶುಗಳು ತೀರಾ ತಣ್ಣಗಿದ್ದು, ವಿದ್ಯುತ್ ಕಡಿತದಿಂದಾಗಿ ದೇಹದ ತಾಪಮಾನ ಸ್ಥಿರವಾಗಿಲ್ಲ. ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವೈರಸ್ ಪ್ರತಿಯೊಬ್ಬರಿಗೂ ಹರಡುತ್ತಿದೆ. ಇವರಲ್ಲಿ ಪ್ರತಿರೋಧ ಶಕ್ತಿ ಕೂಡಾ ಇಲ್ಲ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News