ಗಾಝಾಕ್ಕೆ ಆಹಾರ ನೆರವಿಗೆ ಅಡ್ಡಿ: ವಿಶ್ವಸಂಸ್ಥೆ
ವಿಶ್ವಸಂಸ್ಥೆ : ಗಾಝಾಕ್ಕೆ ನೆರವು ತಲುಪಿಸಲು ಮತ್ತು ಯುದ್ಧ ವಲಯದಾದ್ಯಂತ ಅದನ್ನು ವಿತರಿಸಲು ಅಡೆತಡೆಗಳಿವೆ. ಅಕ್ಟೋಬರ್ 2 ಮತ್ತು ಅಕ್ಟೋಬರ್ 15ರ ನಡುವಿನ ಅವಧಿಯಲ್ಲಿ ಯಾವುದೇ ಆಹಾರ ನೆರವು ಉತ್ತರ ಗಾಝಾ ಪ್ರವೇಶಿಸಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ಗಾಝಾಕ್ಕೆ ಆಹಾರ ತಲುಪಿಸುವ ಕಾರ್ಯಕ್ಕೆ ಇಸ್ರೇಲ್ ಮತ್ತು ಗಾಝಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಾರಣವಾಗಿದೆ ಎಂದು ವಿಶ್ವಸಂಸ್ಥೆ ದೂಷಿಸಿದೆ. ಉತ್ತರ ಗಾಝಾದಲ್ಲಿನ ಹೀನಾಯ, ಅಸಹನೀಯ ಸ್ಥಿತಿಯನ್ನು ಗಮನಿಸಿದರೆ ಮಾನವೀಯ ನೆರವು ಒದಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಿಶ್ವಸಂಸ್ಥೆ ನೆರವು ವಿತರಣೆ ಏಜೆನ್ಸಿಯ ಮುಖ್ಯಸ್ಥೆ ಜಾಯ್ಸ್ ಎಂಸುಯ ಹೇಳಿದ್ದಾರೆ.
ಗಾಝಾದಲ್ಲಿ ಕಳೆದ 2 ವಾರಗಳಲ್ಲಿ ಇಸ್ರೇಲ್ನೊಂದಿಗೆ ಸಮನ್ವಯಗೊಳಿಸಲಾದ 286 ಮಾನವೀಯ ನೆರವಿನ ಕಾರ್ಯಾಚರಣೆಯಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ಸುಸೂತ್ರವಾಗಿ ನಡೆದಿದೆ. ಅಕ್ಟೋಬರ್ 12ರಂದು ಉತ್ತರ ಗಾಝಾದ 2 ಆಸ್ಪತ್ರೆಗಳಿಗೆ ಮಾನವೀಯ ತಂಡವೊಂದು ಭೇಟಿ ನೀಡಿದ್ದು ಗಂಭೀರ ಅಸ್ವಸ್ಥಗೊಂಡಿದ್ದ 12ಕ್ಕೂ ಅಧಿಕ ರೋಗಿಗಳನ್ನು ಗಾಝಾ ನಗರದ ಅಲ್ಶಿಫಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದವರು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್ ` ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲ್ನ ಕ್ರಮಗಳನ್ನು ಅಮೆರಿಕ ಗಮನಿಸುತ್ತಿದೆ ಮತ್ತು ಉತ್ತರ ಗಾಝಾಪಟ್ಟಿಯಲ್ಲಿ `ಉಪವಾಸ ಕೆಡಹುವ ಕಾರ್ಯನೀತಿ'ಯನ್ನು ಇಸ್ರೇಲ್ ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ' ಎಂದು ಹೇಳಿದ್ದಾರೆ.
`ಅದು ತಮ್ಮ ನೀತಿಯಲ್ಲ ಮತ್ತು ಆಹಾರ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ತಡೆಯುವುದಿಲ್ಲ ಎಂದು ಇಸ್ರೇಲ್ ಸರಕಾರ ಹೇಳಿದೆ. ಅವರ ಕೃತ್ಯ ಹಾಗೂ ಹೇಳಿಕೆಗಳು ಹೊಂದಿಕೆಯಾಗುತ್ತವೆಯೇ ಎಂಬ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ತಕ್ಷಣದಿಂದಲೇ ಗಾಝಾಕ್ಕೆ ಆಹಾರ ಹಾಗೂ ಇತರ ವಸ್ತುಗಳ ಪೂರೈಕೆಯನ್ನು ಹೆಚ್ಚಿಸಬೇಕು. ಲಸಿಕೆ ಹಾಕಿಸಲು ಹಾಗೂ ಮಾನವೀಯ ನೆರವು ವಿತರಣೆಗೆ ಅವಕಾಶ ಮಾಡಿಕೊಡಲು ಗಾಝಾದ್ಯಂತ ಮಾನವೀಯ ವಿರಾಮದ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಫೆಲೆಸ್ತೀನ್ ಪ್ರದೇಶದಲ್ಲಿ ಮಾನವೀಯ ಪರಿಸ್ಥಿತಿಯನ್ನು ಸುಧಾರಿಸಲು ಮುಂದಿನ 30 ದಿನಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಅಥವಾ ಅಮೆರಿಕದ ಮಿಲಿಟರಿ ನೆರವಿನ ಮೇಲೆ ಸಂಭಾವ್ಯ ನಿರ್ಬಂಧಗಳನ್ನು ಎದುರಿಸಬೇಕು ಎಂದು ಅಕ್ಟೋಬರ್ 15ರಂದು ಇಸ್ರೇಲ್ಗೆ ಗಡು ವಿಧಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.