ಗಾಝಾ ಯುದ್ಧ ವಿರಾಮ ಇರಾನ್ ದಾಳಿಯನ್ನು ತಡೆಯಬಹುದು | ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಮೆರಿಕ ಹೇಳಿಕೆ
ವಿಶ್ವಸಂಸ್ಥೆ : ಮಧ್ಯಪ್ರಾಚ್ಯ ವಲಯದಲ್ಲಿ ಉದ್ವಿಗ್ನತೆ ಕಡಿಮೆಗೊಳಿಸಲು ಮತ್ತು ಗಾಝಾ ಒಪ್ಪಂದ ಅಂತಿಮಗೊಳ್ಳಲು ತಾನು ಬಯಸುತ್ತಿದ್ದು ಒಪ್ಪಂದಕ್ಕೆ ಸಹಿ ಬಿದ್ದರೆ ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಲಿಕ್ಕಿಲ್ಲ ಎಂದು ಅಮೆರಿಕ ಹೇಳಿದೆ.
ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಲಿಂಡಾ ಥೋಮಸ್-ಗ್ರೀನ್ಫೀಲ್ಡ್, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನಕ್ಕೆ ಅಮೆರಿಕ ಪ್ರಯತ್ನ ಮುಂದುವರಿಸಿದ್ದು ಕದನ ವಿರಾಮ ಒಪ್ಪಂದದ ಬಗ್ಗೆ ಹಮಾಸ್ ಜತೆ ಚರ್ಚೆಗೆ ಅಮೆರಿಕ ಪ್ರತಿನಿಧಿಯನ್ನು ರವಾನಿಸಲಿದೆ ಎಂದರು. ಇರಾನ್ನ ಪ್ರತೀಕಾರ ದಾಳಿಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಇಸ್ರೇಲ್ ಹೆಚ್ಚು ಜಾಗರೂಕವಾಗಿರುವುದರಿಂದ ಪೂರ್ಣ ಪ್ರಮಾಣದ ಸಂಘರ್ಷ `ಅನಿವಾರ್ಯ'ವಲ್ಲ. ಉದ್ವಿಗ್ನತೆ ಕಡಿಮೆಗೊಳಿಸುವುದು, ಯಾವುದೇ ಭವಿಷ್ಯದ ದಾಳಿಯನ್ನು ತಡೆಯುವುದು ಮತ್ತು ರಕ್ಷಿಸುವುದು ಹಾಗೂ ಪ್ರಾದೇಶಿಕ ಸಂಘರ್ಷವನ್ನು ತಪ್ಪಿಸುವುದು ಅಮೆರಿಕದ ಪ್ರಧಾನ ಗುರಿಯಾಗಿದೆ. ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇರುವವರ ಬಿಡುಗಡೆ ಸಹಿತ ಕದನ ವಿರಾಮ ರೂಪುಗೊಂಡರೆ ಇದು ಸಾಧ್ಯವಾಗಲಿದೆ. ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಅನ್ನು ತಡೆಯಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಫೆಲೆಸ್ತೀನ್ ಆರೋಪಿಸಿದೆ. ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಫೆಲೆಸ್ತೀನ್ ಪ್ರತಿನಿಧಿ ರಿಯಾದ್ ಮನ್ಸೂರ್ `ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಿ. ಸಾವಿರಾರು ಪ್ರಜೆಗಳನ್ನು ಕೊಲ್ಲುವುದು, ಬರಗಾಲವನ್ನು ಹೇರುವುದು, ಕೈದಿಗಳಿಗೆ ಚಿತ್ರಹಿಂಸೆ, ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡು ವಸಾಹತುಗಳನ್ನಾಗಿ ಮಾಡುವುದನ್ನು ನಿಲ್ಲಿಸುವಂತೆ ನೀವು ಮನವಿ ನೀಡಿದ ತಕ್ಷಣ ಇಸ್ರೇಲ್ ಒಪ್ಪಿಕೊಳ್ಳುತ್ತದೆ ಎಂದು ಭಾವಿಸುವುದನ್ನು ನಿಲ್ಲಿಸಿ. ನೀವು ಮನವಿ ಮಾಡುವುದಲ್ಲ ಆಗ್ರಹಿಸಬೇಕು' ಎಂದರು. ಬಳಿಕ ಮಾತನಾಡಿದ ವಿಶ್ವಸಂಸ್ಥೆಗೆ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಇಸ್ರೇಲ್ ಮೇಲೆ ಯುದ್ಧದ ಬೆದರಿಕೆ ಒಡ್ಡುತ್ತಿರುವ ಇರಾನ್ ಅನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡಿಸಿಲ್ಲ ಎಂದು ಆಕ್ಷೇಪಿಸಿದರು. ಎಪ್ರಿಲ್ನಲ್ಲಿ ಮಾಡಿದಂತೆಯೇ, ಇರಾನ್ನಿಂದ ನೇರ ದಾಳಿಗೆ ಲಕ್ಷಾಂತರ ಇಸ್ರೇಲಿಯನ್ನರು ಸಿದ್ಧತೆ ನಡೆಸುತ್ತಿದ್ದಾರೆ. ಇರಾನ್ನ ಆಕ್ರಮಣವು ಇಡೀ ಪ್ರದೇಶವನ್ನು ಯುದ್ಧದ ಭೀತಿಗೆ ನೂಕಿದೆ ಎಂದವರು ಹೇಳಿದರು.
►ಒಪ್ಪಂದ ಅಂತಿಮಗೊಳಿಸಲು ಇದು ಸಕಾಲ : ಬೈಡನ್
ಗಾಝಾದಲ್ಲಿ ಕದನ ವಿರಾಮ ಒಪ್ಪಂದ ಪೂರ್ಣಗೊಳಿಸಲು ಇದು ಸಕಾಲವಾಗಿದೆ. ಕದನ ವಿರಾಮ ಒಪ್ಪಂದ ಪೂರ್ಣಗೊಳಿಸಲು ಅಮೆರಿಕ ತೀವ್ರ ಪ್ರಯತ್ನ ಮುಂದುವರಿಸಿದೆ. ನಮ್ಮ ಕಾರ್ಯ ಫಲ ನೀಡುವ ನಿರೀಕ್ಷೆಯಿದೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ಮಧ್ಯೆ, ಲೆಬನಾನ್ಗೆ ಭೇಟಿ ನೀಡಿರುವ ಅಮೆರಿಕದ ಪ್ರತಿನಿಧಿ ಅಮೋಸ್ ಹೊಚ್ಸ್ಟೈನ್ ` ಲೆಬನಾನ್ನ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ 10 ತಿಂಗಳಿಂದ ನಡೆಯುತ್ತಿರುವ ಗಡಿಯಾಚೆಗಿನ ದಾಳಿಯನ್ನೂ ನಿಲ್ಲಿಸಲು ನೆರವಾಗುವ ಗಾಝಾ ಕದನವಿರಾಮ ಒಪ್ಪಂದವನ್ನು ಇನ್ನು ವಿಳಂಬಿಸುವಂತಿಲ್ಲ' ಎಂದು ಹೇಳಿದ್ದಾರೆ. ಹಿಜ್ಬುಲ್ಲಾ ಗುಂಪಿಗೆ ನಿಕಟವಾಗಿರುವ ಲೆಬನಾನ್ ಸಂಸತ್ ಸ್ಪೀಕರ್ ನಬಿಹ್ ಬೆರ್ರಿ ಜತೆ ಮಾತುಕತೆ ನಡೆಸಿದ್ದು ಸಮಯ ವ್ಯರ್ಥ ಮಾಡದೆ ಕದನ ವಿರಾಮ ಒಪ್ಪಂದ ಏರ್ಪಡಬೇಕೆಂಬ ನಿಲುವಿಗೆ ಅವರೂ ಸಹಮತ ಸೂಚಿಸಿದ್ದಾರೆ. ಗಾಝಾದ ಕದನ ವಿರಾಮ ಒಪ್ಪಂದವು ಲೆಬನಾನ್ಗೂ ಪೂರಕವಾಗಲಿದೆ ಮತ್ತು ವ್ಯಾಪಕ ಯುದ್ಧದ ಅಪಾಯವನ್ನು ನಿವಾರಿಸಲಿದೆ' ಎಂದು ಅಮೋಸ್ ಹೊಚ್ಸ್ಟೈನ್ ಹೇಳಿದ್ದಾರೆ.