ಮಕ್ಕಳಿಗೆ ಗಾಝಾ `ಪ್ರಪಂಚದ ಅತ್ಯಂತ ಅಪಾಯಕಾರಿ ಸ್ಥಳ' ; ಯುನಿಸೆಫ್ ವರದಿ

Update: 2023-11-25 16:51 GMT

Photo: unicef.org

ನ್ಯೂಯಾರ್ಕ್: ಗಾಝಾ ಪಟ್ಟಿಯು ಮಕ್ಕಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು ಫೆಲೆಸ್ತೀನಿಯನ್ ಮಕ್ಕಳು ಅತ್ಯಂತ ದುರಂತ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸೆಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಗಾಝಾದಲ್ಲಿ ಹತ್ಯೆಯಾದವರಲ್ಲಿ 40%ದಷ್ಟು ಮಕ್ಕಳು ಎಂದು ಇತ್ತೀಚಿನ ಅಂಕಿ ಅಂಶ ತೋರಿಸಿದೆ. ಕೇವಲ 48 ದಿನಗಳ ಯುದ್ಧದಲ್ಲಿ 5,300ಕ್ಕೂ ಅಧಿಕ ಫೆಲೆಸ್ತೀನಿಯನ್ ಮಕ್ಕಳು ಸಾವನ್ನಪ್ಪಿರುವ ವರದಿಯಿದೆ. ಗಾಝಾದಲ್ಲಿ ಮಕ್ಕಳ ಮೇಲೆ ನಡೆಸಲಾದ ಹಿಂಸಾಚಾರದ ಪರಿಣಾಮಗಳು ವಿವೇಚನಾರಹಿತ ಮತ್ತು ಅಸಾಮಾನ್ಯ ದುರಂತವಾಗಿದೆ. ಬಾಂಬ್ ಸ್ಫೋಟಗೊಂಡ ಕಟ್ಟಡಗಳ ಅವಶೇಷಗಳಡಿಯಲ್ಲಿ 1,200ಕ್ಕೂ ಅಧಿಕ ಮಕ್ಕಳು ಉಳಿದಿದ್ದಾರೆ ಅಥವಾ ಲೆಕ್ಕಕ್ಕೆ ಸಿಗುತ್ತಿಲ್ಲ ಎಂಬ ವರದಿಯೂ ಬರುತ್ತಿದೆ ' ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಕ್ಯಾಥರಿನ್ ರಸೆಲ್ ಹೇಳಿದ್ದಾರೆ.

ಬಂಧನದಲ್ಲಿರುವ ಬಿಡುಗಡೆ ಹಾಗೂ ಗಾಝಾದಲ್ಲಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಕಲ್ಪಿಸುವ ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಒಪ್ಪಂದ ಸ್ವಾಗತಾರ್ಹ. ಆದರೆ ಮಕ್ಕಳ ಸುರಕ್ಷತೆ ಹಾಗೂ ಯೋಗಕ್ಷೇಮ ಖಾತರಿಪಡಿಸಲು ಈ ಒಪ್ಪಂದ ಸಾಕಾಗದು. ಮಾನವೀಯ ವಿರಾಮ ಖಂಡಿತಾ ಸಾಕಾಗುವುದಿಲ್ಲ. ಈ ಹತ್ಯಾಕಾಂಡವನ್ನು ತಕ್ಷಣ ಅಂತ್ಯಗೊಳಿಸಲು ಮಾನವೀಯ ಕದನ ವಿರಾಮ ಜಾರಿಯಾಗಬೇಕು. ಗಾಝಾದ ದಕ್ಷಿಣದಲ್ಲಿ ಮತ್ತೆ ಮಿಲಿಟರಿ ಕಾರ್ಯಾಚರಣೆ ಉಲ್ಬಣಗೊಂಡರೆ ಹೆಚ್ಚುವರಿ ಸ್ಥಳಾಂತರಕ್ಕೆ ಕಾರಣವಾಗಿ ಅಲ್ಲಿನ ಮಾನವೀಯ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ದಕ್ಷಿಣ ಗಾಝಾದ ಮೇಲಿನ ದಾಳಿಯನ್ನು ತಪ್ಪಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಅಪೌಷ್ಟಿಕತೆ ಸಮಸ್ಯೆ ಹೆಚ್ಚಳ

ಗಾಝಾದ ಮಕ್ಕಳಲ್ಲಿ ತೀವ್ರವಾದ ಅಪೌಷ್ಟಿಕತೆಯು ಮುಂದಿನ ತಿಂಗಳಲ್ಲಿ ಸುಮಾರು 30%ದಷ್ಟು ಹೆಚ್ಚಾಗಬಹುದು. ಸುಮಾರು 1 ದಶಲಕ್ಷ ಮಕ್ಕಳು ಅಥವಾ ಈ ಪ್ರದೇಶದಲ್ಲಿರುವ ಎಲ್ಲಾ ಮಕ್ಕಳೂ ಈಗ ಆಹಾರದ ಅಭದ್ರತೆ ಎದುರಿಸುತ್ತಿದ್ದು ಇದು ಮುಂದಿನ ದಿನಗಳಲ್ಲಿ ಈ ಪೌಷ್ಟಿಕಾಂಶದ ಬಿಕ್ಕಟ್ಟು ದುರಂತವಾಗಬಹುದು. ಪ್ರಸ್ತುತ ಗಾಝಾದಲ್ಲಿ ಸುಮಾರು 1.7 ದಶಲಕ್ಷ ಜನತೆ ಸ್ಥಳಾಂತರಗೊಂಡಿದ್ದು ಇವರಲ್ಲಿ 50%ದಷ್ಟು ಮಕ್ಕಳು. ತಾತ್ಕಾಲಿಕ ಆರೈಕೆಯನ್ನು ಪಡೆಯಲು ಈ ಮಕ್ಕಳನ್ನು ಗುರುತಿಸಬೇಕು ಮತ್ತು ಅವರ ಕುಟುಂಬವನ್ನು ಪತ್ತೆಹಚ್ಚಿ ಅವರ ಜತೆ ಸೇರಿಸಬೇಕು ಎಂದು ಯುನಿಸೆಫ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News