ರಣರಂಗವಾದ ಗಾಝಾದ ರಸ್ತೆಗಳು: ಇಸ್ರೇಲ್-ಹಮಾಸ್ ನಡುವೆ ತೀವ್ರ ಸಂಘರ್ಷ
ಗಾಝಾ : ಗಾಝಾ ನಗರವನ್ನು ಸುತ್ತುವರಿದಿರುವ ಇಸ್ರೇಲ್ನ ಪದಾತಿದಳ ನಗರದತ್ತ ಮುಂದುವರಿದಿರುವಂತೆಯೇ ಗಾಝಾದ ಬೀದಿಗಳಲ್ಲಿ ಹಮಾಸ್-ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ ಎಂದು ವರದಿಯಾಗಿದೆ.
ಇಸ್ರೇಲ್ನ ಪದಾತಿದಳದ ಪಡೆಗಳು 10 ಗಂಟೆಗಳ ಹೋರಾಟದ ಬಳಿಕ ಜಬಾಲಿಯಾದಲ್ಲಿ ಹೊರಠಾಣೆ 17 ಎಂದು ಕರೆಯಲ್ಪಡುವ ಹಮಾಸ್ನ ಭದ್ರಕೋಟೆಯನ್ನು ವಶಕ್ಕೆ ಪಡೆದಿರುವುದಾಗಿ ಇಸ್ರೇಲ್ ಹೇಳಿದೆ.
ಸಂಘರ್ಷಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:
► ಲೆಬನಾನ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಇಸ್ರೇಲ್ನ ಪೂರ್ಣ ಮೀಸಲು ಪಡೆ ಹೋರಾಟದಲ್ಲಿ ಭಾಗಿಯಾಗಿದೆ.
► ಗಾಝಾಪಟ್ಟಿಯಲ್ಲಿ ನಡೆದ ಹೋರಾಟದಲ್ಲಿ ಇಸ್ರೇಲ್ನ ಯೋಧ ಮೃತಪಟ್ಟಿರುವುದಾಗಿ ಮೂಲಗಳು ಹೇಳಿವೆ.
► ಸಿರಿಯಾದಲ್ಲಿ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಕನಿಷ್ಟ 12 `ಇರಾನ್ ಪರ ಹೋರಾಟಗಾರರು ಹತರಾಗಿದ್ದಾರೆ ಎಂದು ಮಾಧ್ಯಮ ವರದಿ.
► ಗಾಝಾದ ಭದ್ರತೆಯನ್ನು ನಿರ್ವಹಿಸಲು ಫೆಲೆಸ್ತೀನಿಯನ್ ಪ್ರಾಧಿಕಾರ ಸನ್ನದ್ಧವಾಗುವವರೆಗೆ ಗಾಝಾದ ಭದ್ರತೆ ನಿರ್ವಹಿಸಬೇಕು ಎಂಬ ಅಮೆರಿಕದ ಪ್ರಸ್ತಾವವನ್ನು ಈಜಿಪ್ಟ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.
► ಗಾಝಾದಲ್ಲಿ ಹಮಾಸ್ ವಿರುದ್ಧ ನೆಲದ ಮೇಲೆ ಮತ್ತು ನೆಲದ ಅಡಿ(ಸುರಂಗ)ದಲ್ಲಿ ಐಡಿಎಫ್ ಹೋರಾಟ ಮುಂದುವರಿಸಿದೆ ಎಂದು ಇಸ್ರೇಲ್ ಹೇಳಿದೆ.
► ಪಶ್ಚಿಮದಂಡೆಯಲ್ಲಿ ಇಸ್ರೇಲ್ ಪಡೆಯ ಜತೆಗಿನ ಸಂಘರ್ಷದಲ್ಲಿ ಇಬ್ಬರು ಫೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಫೆಲೆಸ್ತೀನಿಯನ್ ಪ್ರಾಧಿಕಾರ ಹೇಳಿದೆ.
► ಪಶ್ಚಿಮ ಗಾಝಾದ ಅಲ್-ನಸರ್ ಆಸ್ಪತ್ರೆಯ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 3 ಮಂದಿ ಮೃತಪಟ್ಟಿರುವುದಾಗಿ ವಫಾ ಸುದ್ಧಿಸಂಸ್ಥೆ ವರದಿ ಮಾಡಿದೆ.
► ಗಾಝಾಪಟ್ಟಿಯ ಮೇಲಿನ ನಿಯಂತ್ರಣವನ್ನು ಹಮಾಸ್ ಕಳೆದುಕೊಂಡಿದೆ ಎಂದು ಇಸ್ರೇಲ್ ಹೇಳಿದೆ.