ಇಸ್ಲಾಮೋಫೋಬಿಯಾದಿಂದ ಜಾಗತಿಕ ಮುಸ್ಲಿಂ ಸಮುದಾಯದ ಮೇಲಾಗುತ್ತಿರುವ ಪರಿಣಾಮ; ಪರಿಶೀಲನೆಗೆ ಕರೆ
ಖತರ್: ಇಸ್ಲಾಮೋಫೋಬಿಯಾ ಮತ್ತು ಇನ್ನಿತರ ಮಾದರಿಯ ತಾರತಮ್ಯಗಳು, ಪಕ್ಷಪಾತ ಹಾಗೂ ಜನಾಂಗೀಯವಾದದ ವಿರುದ್ಧ ಖತರ್‌ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಜಾಗತಿಕ ಚರಿತ್ರೆಗಳು ಮತ್ತು ಇಸ್ಲಾಮೋಫೋಬಿಯಾದ ಅಭ್ಯಾಸಗಳು" ವಿಚಾರಗೋಷ್ಠಿಯಲ್ಲಿ ಪ್ರಬಲವಾದ ಒಗ್ಗಟ್ಟನ್ನು ಪ್ರದರ್ಶಿಸುವ ಸಂದೇಶ ರವಾನಿಸಲಾಯಿತು.
ಮುಸ್ಲಿಂ ವಿರೋಧಿ ಪಕ್ಷಪಾತ ಹಾಗೂ ದ್ವೇಷ ಸಂಬಂಧಿ ಘಟನೆಗಳನ್ನು ಸುತ್ತುವರಿದಿರುವ ಜಾಗತಿಕ ಅನುಮಾನಗಳಿಗೆ ಪ್ರತಿಯಾಗಿ ವಿಚಾರಗೋಷ್ಠಿಯು ಇಸ್ಲಾಮೋಫೋಬಿಯಾ ಹಾಗೂ ಅದರ ತೀವ್ರ ಸ್ವರೂಪದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಮತ್ತಿತರ ಆಯಾಮಗಳ ಕುರಿತು ಪರಿಶೀಲನೆ ನಡೆಸಿತು. ವಿಚಾರಗೋಷ್ಠಿಯನ್ನುದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಯಭಾರಿ ಹಾಗೂ ವರ್ಲ್ಡ್ ಫಾರ್ ಆಲ್ ಫೌಂಡೇಶನ್‌ನ ಸಂಸ್ಥಾಪಕ ಇಬ್ರಾಹಿಂ ರಸೂಲ್, "ನಾವು ಎಲ್ಲ ಬಗೆಯ ವಾದಗಳು ಹಾಗೂ ಭೀತಿಯನ್ನು ಸೃಷ್ಟಿಸುತ್ತೇವೆ. ಅಪರಿಚಿತ ಭೀತಿ ಎಂಬಂತೆ ಬಿಂಬಿಸುತ್ತೇವೆ, ಆ ಮೂಲಕ ನಿಗಾ ಸ್ಥಿತಿಯನ್ನು ಕ್ರಿಯಾಶೀಲಗೊಳಿಸುತ್ತೇವೆ. ಪ್ರತಿ ತಪ್ಪಿಗೂ ನಾಜೂಕು ಶಿಕ್ಷೆಗಳು ಹಾಗೂ ವಲಸೆಯ ನೀತಿಗಳನ್ನು ಕರಾರುವಾಕ್ಕಾಗಿಸುತ್ತೇವೆ. ಒಂದು ವೇಳೆ ಅವು ಸಾಮಾನ್ಯ ಕಾನೂನುಗಳಾಗಿದ್ದರೆ ನಾವದನ್ನು ಜಾರಿಗೊಳಿಸುತ್ತೇವೆ. ಈ ಎಲ್ಲ ಸಂಗತಿಗಳನ್ನು ತಿರುಚಲಾಗಿದೆ. ಈ ದಿನಗಳಲ್ಲಿ ಮುಖ್ಯ ವಾಹಿನಿಯ ಉಗ್ರವಾದವನ್ನಾಗಿ ಮಾತ್ರ ಅವನ್ನು ವ್ಯಾಖ್ಯಾನಿಸಲಾಗುತ್ತಿದೆ" ಎಂದು ಅಭಿಪ್ರಾಯ ಪಟ್ಟರು.
ಇಸ್ಲಾಮೋಫೋಬಿಯಾವನ್ನು ಹಿಮ್ಮೆಟ್ಟಿಸಲು ಇರುವ ರಾಜತಾಂತ್ರಿಕ ಹಾಗೂ ಕ್ರೀಡಾ ಸಾಧ್ಯತೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ರಸೂಲ್, ಖತರ್ ಫಿಫಾ ವಿಶ್ವಕಪ್ 2022 ಆಯೋಜಿಸುವ ಮೂಲಕ ಸಾರ್ವಜನಿಕ ರಾಜತಾಂತ್ರಿಕತೆಯನ್ನು ಪ್ರದರ್ಶಿಸಿದ್ದು, ಇಸ್ಲಾಂ ವಿರೋಧಿ ಭಾವನೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ಹೇಳಿದರು.
ರವಿವಾರವೂ ಮುಂದುವರಿದ ವಿಚಾರ ಗೋಷ್ಠಿಯಲ್ಲಿ ಖ್ಯಾತ ವಿದ್ವಾಂಸರು, ಶಿಕ್ಷಣ ತಜ್ಞರು ಪ್ರಚಲಿತ ಇಸ್ಲಾಮೋಫೋಬಿಯಾ ಬೆಳವಣಿಗೆಗಳೂ ಹಾಗೂ ಅದಕ್ಕಿರುವ ಜಾಗತಿಕ ಸಂಪರ್ಕಗಳ ತೀವ್ರತೆಯ ಕುರಿತು ಬೆಳಕು ಚೆಲ್ಲಿದರು. ಈ ವಿಚಾರ ಗೋಷ್ಠಿಯೊಂದಿಗೆ ಖತರ್‌ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನೇತೃತ್ವದ ವೇದಿಕೆ, ಇಸ್ಲಾಮೋಫೋಬಿಯಕ್ಕೆ ಸೂಕ್ತ ಪ್ರತಿರೋಧ ನೀಡಲು ಉತ್ತರಗಳನ್ನು ಕಂಡುಕೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.