ಜರ್ಮನಿಯಲ್ಲಿ ಕಡ್ಡಾಯ ಮಿಲಿಟರಿ ಸೇವೆ ಕಾನೂನಿಗೆ ಚಿಂತನೆ
ಬರ್ಲಿನ್ : ಮಿಲಿಟರಿಯಲ್ಲಿ ಯೋಧರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯುವ ಜನತೆಗೆ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸುವ ಸಲಹೆಯನ್ನು ಜರ್ಮನ್ ಸರಕಾರ ಪರಿಶೀಲಿಸುತ್ತಿದೆ ಎಂದು ರಕ್ಷಣಾ ಸಚಿವ ಬೋರಿಸ್ ಪಿಸ್ಟೋರಿಯಸ್ ಹೇಳಿರುವುದಾಗಿ `ದಿ ಮೆಟ್ರೊ' ಸುದ್ಧಿಸಂಸ್ಥೆ ವರದಿ ಮಾಡಿದೆ.
ಜರ್ಮನಿ ರಕ್ಷಣಾ ಪಡೆಯಲ್ಲಿ ಈಗ 21,000 ಯೋಧರ ಕೊರತೆಯಿದ್ದು ನೇಟೊ ರಕ್ಷಣಾ ಯೋಜನೆಯ ಪ್ರಕಾರ ಈ ಕೊರತೆಯನ್ನು ಸರಿದೂಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು 3 ಪ್ರಸ್ತಾವನೆಗಳನ್ನು ರಕ್ಷಣಾ ಸಚಿವರ ಮುಂದೆ ಇರಿಸಿದ್ದು, ಈ ಬಗ್ಗೆ ಚರ್ಚಿಸಿ ತಿಂಗಳಾಂತ್ಯದೊಳಗೆ ಸಚಿವರು ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಮೊದಲನೆಯ ಪ್ರಸ್ತಾವನೆಯ ಪ್ರಕಾರ `18 ವರ್ಷದ ಎಲ್ಲಾ ಯುವಕರಿಗೂ ನಿರ್ದಿಷ್ಟ ಅವಧಿಯ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸುವುದು'. ಎರಡನೆಯ ಪ್ರಸ್ತಾವನೆಯಲ್ಲಿ ` 18 ವಯಸ್ಸಿನ ಎಲ್ಲಾ ಪುರುಷರೂ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆಯುವುದು. ಇದರಲ್ಲಿ ಅಗತ್ಯಕ್ಕೆ ತಕ್ಕಷ್ಟು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದು'. ಮೂರನೆಯ ಪ್ರಸ್ತಾವನೆಯ ಪ್ರಕಾರ ` ಮಿಲಿಟರಿ ಸೇವೆ ಕಡ್ಡಾಯಗೊಳಿಸುವ ಬದಲು, ಶಾಲೆ ಬಿಟ್ಟವರಿಗೆ ಸೇರ್ಪಡೆ ಫಾರಂ ಅನ್ನು ಕಳುಹಿಸಿಕೊಡಲಾಗುತ್ತದೆ. ಅದನ್ನು ಅವರು ಸ್ವಯಂಪ್ರೇರಣೆಯಿಂದ ಪೂರ್ತಿಗೊಳಿಸಿ ತಮ್ಮ ಆಯ್ಕೆಯನ್ನು ತಿಳಿಸಬಹುದು'. ಮುಂದಿನ ತಿಂಗಳೊಳಗೆ ಸರಕಾರ ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆಯಿದೆ.
ಜರ್ಮನಿಯಲ್ಲಿ ಈ ಹಿಂದೆ ಇದ್ದ ` 18 ವರ್ಷದ ಎಲ್ಲಾ ಯುವಕರೂ ಒಂದು ವರ್ಷ ಕಡ್ಡಾಯವಾಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮವನ್ನು ರದ್ದುಪಡಿಸಿದ್ದು ಸರಿಯಲ್ಲ' ಎಂದು ರಕ್ಷಣಾ ಸಚಿವ ಪಿಸ್ಟೋರಿಯಸ್ ಕಳೆದ ತಿಂಗಳು ಅಮೆರಿಕ ಪ್ರವಾಸದ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.