ಗಾಝಾ ಮೇಲೆ ಇಸ್ರೇಲ್ ನಿಂದ ತೀವ್ರ ದಾಳಿ; ಕದನ ವಿರಾಮ ಉಲ್ಲಂಘನೆ, ಕನಿಷ್ಠ 200 ಮಂದಿ ಮೃತ್ಯು

Update: 2025-03-18 11:09 IST
ಗಾಝಾ ಮೇಲೆ ಇಸ್ರೇಲ್ ನಿಂದ ತೀವ್ರ ದಾಳಿ; ಕದನ ವಿರಾಮ ಉಲ್ಲಂಘನೆ, ಕನಿಷ್ಠ 200 ಮಂದಿ ಮೃತ್ಯು

PC: x.com/AryanVivaswan

  • whatsapp icon

ಗಾಝಾ : ಗಾಝಾದ ಮೇಲೆ ಇಸ್ರೇಲ್ ತೀವ್ರ ದಾಳಿ ಮಾಡಿದ್ದು, ಆ ಮೂಲಕ ಹಮಾಸ್ ನೊಂದಿಗಿನ ಎರಡು ತಿಂಗಳ ಕದನ ವಿರಾಮ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ.

ಮಂಗಳವಾರ ಮುಂಜಾನೆ ಗಾಝಾ ಭೂಪ್ರದೇಶದಾದ್ಯಂತ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಕನಿಷ್ಠ 232 ಫೆಲಸ್ತೀನಿನ ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಅನೇಕರು ಮಕ್ಕಳು ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೃತಪಟ್ಟ ಜನರ ಪೈಕಿ ದಕ್ಷಿಣ ಗಾಝಾದ ಖಾನ್ ಯೂನಿಸ್‌ನಲ್ಲಿ ಕನಿಷ್ಠ 77 ಜನರು ಮತ್ತು ಉತ್ತರದ ಗಾಝಾ ನಗರದ ಕನಿಷ್ಠ 20 ಜನರು ಸೇರಿದ್ದಾರೆ ಎಂದು ವೈದ್ಯಕೀಯ ಮೂಲಗಳು Aljazeera ಗೆ ತಿಳಿಸಿವೆ.

ಹಮಾಸ್ ಬಂಧನದಲ್ಲಿರುವ ಇಸ್ರೇಲ್‌ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು, ಕದನ ವಿರಾಮವನ್ನು ವಿಸ್ತರಿಸಲು ನಿರಾಕರಿಸಿದ್ದಕ್ಕಾಗಿ ಹಮಾಸ್ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುವಂತೆ ಮಿಲಿಟರಿಗೆ ಆದೇಶಿಸಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಗಾಝಾ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸುವ ಸಲುವಾಗಿ ಇಸ್ರೇಲ್ ಮುತ್ತಿಗೆ ಹಾಕಿದೆ. ನಾಗರಿಕರ ಮೇಲೆ ವಿಶ್ವಾಸಘಾತುಕ ದಾಳಿ ನಡೆಸಿದೆ. ಜನವರಿ 19 ರಿಂದ ಜಾರಿಯಲ್ಲಿರುವ ಕದನ ವಿರಾಮವನ್ನು ಇಸ್ರೇಲ್ ಉದ್ದೇಶಪೂರ್ವಕವಾಗಿ ಹಾಳುಮಾಡುತ್ತಿದೆ ಎಂದು ಸಶಸ್ತ್ರ ಹೋರಾಟಗಾರರ ಗುಂಪು ಹಮಾಸ್ ಹೇಳಿದೆ.

ಗಾಝಾದ ಮೇಲೆ ಇಸ್ರೇಲ್ ನಡೆಸಿದ ಯುದ್ಧದಲ್ಲಿ ಇದುವರೆಗೆ ಕನಿಷ್ಠ 48,572 ಫೆಲಸ್ತೀನಿಯನ್ನರು ಮೃತಪಟ್ಟಿದ್ದಾರೆ. 1,12,032 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಝಾದ ಸರ್ಕಾರಿ ಮಾಧ್ಯಮ ಕಚೇರಿ ಸಾವಿನ ಸಂಖ್ಯೆಯನ್ನು 61,700 ಕ್ಕೂ ಹೆಚ್ಚು ಎಂದು ನಮೂದಿಸಿದೆ. ಅವಶೇಷಗಳ ಅಡಿಯಲ್ಲಿ ಕಾಣೆಯಾದ ಸಾವಿರಾರು ಫೆಲಸ್ತೀನಿಯನ್ನರು ಮೃತಪಟ್ಟಿದ್ದಾರೆ ಭಾವಿಸಲಾಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News