ಗಾಝಾದ ಮೇಲೆ ಇಸ್ರೇಲ್ ಸೇನೆಯಿಂದ ಭೀಕರ ವಾಯುದಾಳಿ; ಕನಿಷ್ಠ 404 ಮಂದಿ ಸಾವು
PC: x.com/AryanVivaswan
ದೆರ್ಅಲ್ಬಲಾಹ್: ಗಾಝಾಪಟ್ಟಿಯಲ್ಲಿ ಇಸ್ರೇಲ್ ಸೇನೆ ಮತ್ತೆ ರಕ್ತಪಾತವೆಸಗಿದೆ. ಮಂಗಳವಾರ ನಸುಕಿನಲ್ಲಿ ಇಸ್ರೇಲ್ ಸೇನೆ ಭೀಕರ ವಾಯುದಾಳಿ ನಡೆಸಿದ್ದು, ಕನಿಷ್ಠ 404 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ನಡೆಸಿದ ಈ ದಿಢೀರ್ ಬಾಂಬ್ ಆಕ್ರಮಣವು, ಈ ವರ್ಷದ ಜನವರಿಯಿಂದ ಜಾರಿಗೊಂಡಿದ್ದ ಕದನ ವಿರಾಮವನ್ನು ಭಗ್ನಗೊಳಿಸಿದೆ ಮತ್ತು 17 ತಿಂಗಳುಗಳ ಇಸ್ರೇಲ್-ಫೆಲೆಸ್ತೀನ್ ಸಮರವು ಮತ್ತೆ ಭುಗಿಲೇಳುವ ಭೀತಿ ಉಂಟಾಗಿದೆ.
ಕದನವಿರಾಮ ಒಪ್ಪಂದದಲ್ಲಿ ಬದಲಾವಣೆ ಮಾಡಲು ಹಮಾಸ್ ನಿರಾಕರಿಸಿದ ಆನಂತರ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ವಿರುದ್ಧ ದಾಳಿಗೆ ಆದೇಶ ನೀಡಿದ್ದರು.
ದಕ್ಷಿಣ ಗಾಝಾದ ಖಾನ್ಯೂನಿಸ್ ಹಾಗೂ ರಫಾ, ಉತ್ತರದಲ್ಲಿನ ಗಾಝಾ ನಗರ ಹಾಗೂ ಕೇಂದ್ರ ಪ್ರದೇಶವಾದ ದೆಯಿರ್ ಅಲ್ ಬಲಾಹ್ ಮತ್ತಿತರ ಪ್ರದೇಶಗಳಲ್ಲಿ ಇಸ್ರೇಲ್ ವಾಯುದಾಳಿ ನಡೆಸಿದೆ.ಮೃತಪಟ್ಟವರಲ್ಲಿ ಬಹುತೇಕ ಮಂದಿ ಮಕ್ಕಳೆಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಂಗಳವಾರದ ದಾಳಿಯ ಬಳಿಕ ಗಾಝಾದ ವಿವಿಧ ಆಸ್ಪತ್ರೆಗಳಿಗೆ ಒಟ್ಟು 404 ಮೃತದೇಹಗಳು ಆಗಮಿಸಿವೆ ಹಾಗೂ 562 ಗಾಯಾಳುಗಳು ದಾಖಲಾಗಿದ್ದಾರೆಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ತಿಳಿಸಿದೆ. ಇನ್ನೂ ಹಲವಾರು ಮಂದಿ ಬಾಂಬ್ ದಾಳಿಯಿಂದ ಕುಸಿದುಬಿದ್ದಿರುವ ಕಟ್ಟಡಗಳ ಅವಶೇಷಗಳ ನಡುವೆ ಸಿಲುಕಿರುವ ಸಾಧ್ಯತೆಯಿದೆಯೆಂದು ಅದು ಹೇಳಿದೆ.
ಗಾಝಾದಲ್ಲಿ ಹಮಾಸ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುವ ಸಾಧ್ಯತೆಯಿದೆಯೆಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಅಮೆರಿಕದ ಶ್ವೇತಭವನ ಹೇಳಿಕೆಯೊಂದನ್ನು ಗಾಝಾಪಟ್ಟಿ ಮೇಲೆ ಇಸ್ರೇಲ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದೆ.
ಬೈತ್ ಹನೂನ್ ಮತ್ತಿತರ ದಕ್ಷಿಣ ಗಾಝಾಪಟ್ಟಿ ಪ್ರದೇಶಗಳು ಸೇರಿದಂತೆ ಪೂರ್ವ ಗಾಝಾದಿಂದ ಮನೆಗಳನ್ನು ತೊರೆದುಹೋಗುವಂತೆ ಇಸ್ರೇಲ್ ಸೇನೆ ಫೆಲೆಸ್ತೀನಿಯರಿಗೆ ಆದೇಶಿಸಿದೆ.
‘ಇಂದಿನಿಂದ ಇಸ್ರೇಲ್, ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಂಡು ಹಮಾಸ್ ವಿರುದ್ಧ ಕಾರ್ಯಾಚರಿಸಲಿದೆ ಎಂದು ನೆತನ್ಯಾಹು ಅವರ ಕಾರ್ಯಾಲಯ ತಿಳಿಸಿದೆ.
ಇಸ್ರೇಲ್ ನಡೆಸಿದ ಈ ದಿಢೀರ್ ದಾಳಿಯು ಮುಸ್ಲಿಮರ ಪವಿತ್ರ ರಮಝಾನ್ ತಿಂಗಳಲ್ಲಿ ಗಾಝಾದಲ್ಲಿ ನೆಲೆಸಿದ್ದ ಶಾಂತಿಯುತ ವಾತಾವರಣವನ್ನು ನುಚ್ಚುನೂರು ಮಾಡಿದೆ. ಸಹಸ್ರಾರು ಫೆಲೆಸ್ತೀನಿಯರ ಭೀಕರ ನರಮೇಧಕ್ಕೆ ಕಾರಣವಾದ 17ತಿಂಗಳುಗಳ ಸಮರವು ಮತ್ತೆ ಭುಗಿಲೇಳುವ ಭೀತಿಯನ್ನು ಸೃಷ್ಟಿಸಿದೆ.
ಇನ್ನೂ ಹಮಾಸ್ ನ ಒತ್ತೆಸೆರೆಯಲ್ಲಿರುವ ಸುಮಾರು 25ಕ್ಕೂ ಅಧಿಕ ಇಸ್ರೇಲಿ ಒತ್ತೆಯಾಳುಗಳ ಭವಿಷ್ಯದ ಬಗ್ಗೆ ಅದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುದ್ಧವನ್ನು ಪುನಾರಂಭಿಸುವ ನೆತನ್ಯಾಹು ಅವರ ನಿರ್ಧಾರವು ಇನ್ನೂ ಒತ್ತೆಸೆರೆಯಲ್ಲಿರುವ ಉಳಿದ ಒತ್ತೆಯಾಳುಗಳಿಗೆ ಮರಣಶಾಸನವಾಗಲಿದೆ ಎಂದು ಹಮಾಸ್ ನ ಹಿರಿಯ ಅಧಿಕಾರಿ ಇಜ್ಜತ್ ಅಲ್ ರಿಶೆಕ್ ತಿಳಿಸಿದ್ದಾರೆ. ಕದನವಿರಾಮವನ್ನು ಯಾರು ಉಲ್ಲಂಘಿಸಿದರು ಎಂಬ ಬಗ್ಗೆ ವಾಸ್ತವಾಂಶಗಳನ್ನು ಬಯಲುಗೊಳಿಸಬೇಕೆಂದು ಇಸ್ರೇಲ್-ಹಮಾಸ್ ನಡುವೆ ಶಾಂತಿಯನ್ನು ಏರ್ಪಡಿಸಲು ಯತ್ನಿಸುತ್ತಿರುವ ಸಂಧಾನಕಾರರನ್ನು ಅವರು ಆಗ್ರಹಿಸಿದ್ದಾರೆ.