ಬೆಂಕಿಯುಂಡೆಯಂತಾಗಿ ಭೂಮಿ ಪ್ರವೇಶಿಸಿದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿದ್ದ ಬಾಹ್ಯಾಕಾಶ ನೌಕೆ!

Photo : NASA
ವಾಶಿಂಗ್ಟನ್: ಬಾಹ್ಯಾಕಾಶದಲ್ಲಿ ಒಂಭತ್ತು ತಿಂಗಳು ಸಿಕ್ಕಿಹಾಕಿಕೊಂಡ ಬಳಿಕ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬುಧವಾರ ಮುಂಜಾನೆ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಆದರೆ, ಭೂಮಿಗೆ ಪಾದಾರ್ಪಣೆ ಮಾಡುವ ಮೊದಲಿನ ಗಂಟೆಗಳ ಅವಧಿಯಲ್ಲಿ ಅನಿಶ್ಚಿತತೆ ನೆಲೆಸಿತ್ತು.
ಯಾನದ ಕೊನೆಯ ಹಂತವು ಅತ್ಯಂತ ಅಪಾಯಕಾರಿಯಾಗಿತ್ತು. ಅದು ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಹಂತ. ಈ ಹಂತದಲ್ಲಿ ಕ್ಯಾಪ್ಸೂಲ್ ಗಂಟೆಗೆ 28,800 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಇದರಿಂದ ಉದ್ಭವಿಸುವ ಘರ್ಷಣೆಯಿಂದಾಗಿ ಕ್ಯಾಪ್ಸೂಲ್‌ನ ಹೊರಕವಚದ ಉಷ್ಣತೆಯು ಸುಮಾರು 1,600 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆ. ಶಾಖ ನಿರೋಧಕ ವ್ಯವಸ್ಥೆಗಳು ಕ್ಯಾಪ್ಸೂಲ್‌ನ ಒಳಗಿದ್ದವರನ್ನು ರಕ್ಷಿಸುತ್ತವೆ.
ಅಂದರೆ, ಈ ಹಂತದಲ್ಲಿ ಬಾಹ್ಯಾಕಾಶ ನೌಕೆಯು ಬೆಂಕಿಯುಂಡೆಯಂತೆ ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತದೆ ಮತ್ತು ಸಮುದ್ರದತ್ತ ಧಾವಿಸುತ್ತದೆ. ಆ ಬಳಿಕವಷ್ಟೇ ಸುನೀತಾ ವಿಲಿಯಮ್ಸ್‌ರ ವಾಪಸಾತಿಯನ್ನು ಸಂಭ್ರಮಿಸಲಾಯಿತು.
ಶಾಖ ನಿಗ್ರಹಕ್ಕಾಗಿ ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಫಿನೋಲಿಕ್ ಇಂಪ್ರೆಗ್ನೇಟಡ್ ಕಾರ್ಬನ್ ಆ್ಯಬ್ಲೇಟರ್ (ಪಿಕ) ಎಂಬ ಶಾಖ ರಕ್ಷಣಾ ಕವಚವನ್ನು ಬಳಸಲಾಗುತ್ತದೆ.
ಸುನೀತಾ ಮತ್ತು ವಿಲ್ಮೋರ್‌ರನ್ನು ಭೂಮಿಗೆ ಕರೆತಂದ ಸ್ಪೇಸ್ ಎಕ್ಸ್‌ನ ಕ್ಯಾಪ್ಸೂಲ್ ಬಾಹ್ಯಾಕಾಶದಿಂದ ಹೊರಡುವಾಗ ಶುಭ್ರ ಬಿಳಿಯಾಗಿತ್ತು. ಭೂಮಿಯಲ್ಲಿ ಜಲಸ್ಪರ್ಶ ಮಾಡುವ ವೇಳೆಗೆ ಅದು ಕಂದು ಬಣ್ಣಕ್ಕೆ ತಿರುಗಿತ್ತು. ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಸೃಷ್ಟಿಯಾದ ಅಗಾಧ ಶಾಖದಿಂದಾಗಿ ಅದರ ಬಣ್ಣ ಬದಲಾಗಿದೆ.