ರಶ್ಯದ ಪರಮಾಣು ಬಾಂಬರ್ ವಾಯುನೆಲೆ ಮೇಲೆ ಉಕ್ರೇನ್ ದಾಳಿ

PC | NDTV
ಮಾಸ್ಕೋ: ಉಕ್ರೇನ್ ಗಡಿಭಾಗದಿಂದ ಸುಮಾರು 700 ಕಿ.ಮೀ ದೂರದಲ್ಲಿರುವ ರಶ್ಯದ ಸರಟೋವ್ ಪ್ರಾಂತದ ಎಂಗೆಲ್ಸ್ ಜಿಲ್ಲೆಯಲ್ಲಿರುವ ಬಾಂಬರ್ ವಾಯುನೆಲೆಯನ್ನು ಗುರಿಯಾಗಿಸಿ ಗುರುವಾರ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು ವಾಯುನೆಲೆಯಲ್ಲಿ ಭಾರೀ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಠ 10 ಮಂದಿ ಗಾಯಗೊಂಡಿದ್ದು ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ವಾಯುನೆಲೆಯಲ್ಲಿ ಸಂಭವಿಸಿದ ಸ್ಫೋಟದಿಂದ ಸಮೀಪದ ಕುಟೀರಗಳು ಧ್ವಂಸಗೊಂಡಿವೆ. ಬುಧವಾರ ರಾತ್ರಿಯಿಂದ ರಶ್ಯದ ಭೂಪ್ರದೇಶದಲ್ಲಿದ್ದ 132 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ಹಳಿತಪ್ಪಿಸುವ ಉದ್ದೇಶ ಇದಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಉಕ್ರೇನ್ ಆಡಳಿತದ ಮತ್ತೊಂದು ಪ್ರಚೋದನಕಾರಿ ಕ್ರಮ ಇದಾಗಿದ್ದು ಶಾಂತಿ ಉಪಕ್ರಮಗಳನ್ನು ಅಡ್ಡಿಪಡಿಸುವ ಗುರಿ ಹೊಂದಿರುವುದು ಸ್ಪಷ್ಟವಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಹೇಳಿದ್ದಾರೆ.
ಸೋವಿಯತ್ ಯುಗದ ಅವಧಿಗೆ ಸೇರಿರುವ ಎಂಗೆಲ್ಸ್ ಬಾಂಬರ್ ವಾಯುನೆಲೆಯಲ್ಲಿ ರಶ್ಯದ ಟುಪೊಲೆವ್ ಟಿಯು-160 ಪರಮಾಣು ಸಿಡಿತಲೆ ಬಾಂಬರ್ ವಿಮಾನಗಳನ್ನು ಇರಿಸಲಾಗಿದೆ. ಉಕ್ರೇನ್ ಡ್ರೋನ್ ದಾಳಿಯ ಬಳಿಕ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಮೀಪದ ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಮತ್ತು ಸ್ಥಳೀಯವಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದು ಸರಟೋವ್ ಗವರ್ನರ್ ರೊಮನ್ ಬುಸರ್ಗಿನ್ ಹೇಳಿದ್ದಾರೆ.
ಈ ಮಧ್ಯೆ, ಬುಧವಾರ ರಾತ್ರಿ ಪೂರ್ವ ಉಕ್ರೇನ್‍ನ ಮೇಲೆ ರಶ್ಯ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.