ರಶ್ಯ ತೊರೆಯಿರಿ ಅಥವಾ ಪೌರತ್ವ ಪಡೆಯಿರಿ: ಉಕ್ರೇನಿಯನ್ನರಿಗೆ ಪುಟಿನ್ ಆದೇಶ

ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ: ರಶ್ಯದಲ್ಲಿ ವಾಸಿಸುತ್ತಿರುವ ಉಕ್ರೇನ್ ಪ್ರಜೆಗಳು ಸೆಪ್ಟಂಬರ್ 10ರ ಒಳಗೆ ದೇಶದಿಂದ ನಿರ್ಗಮಿಸಬೇಕು ಅಥವಾ ರಶ್ಯದ ಪೌರತ್ವ ಪಡೆಯಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶಿಸಿರುವುದಾಗಿ ಮಾಸ್ಕೋ ಟೈಮ್ಸ್ ವರದಿ ಮಾಡಿದೆ.
ರಶ್ಯದಲ್ಲಿ ಉಳಿಯಲು ಅಥವಾ ವಾಸಿಸಲು ಯಾವುದೇ ಕಾನೂನುಬದ್ಧ ಆಧಾರಗಳಿಲ್ಲದ ಉಕ್ರೇನಿಯನ್ನರು ಸೆಪ್ಟಂಬರ್ 10ರ ಒಳಗೆ ರಶ್ಯದಿಂದ ನಿರ್ಗಮಿಸಬೇಕು ಅಥವಾ ಪೌರತ್ವ ಪಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಭಾಗಶಃ ಆಕ್ರಮಿತ ಪ್ರದೇಶಗಳಾದ ಡೊನೆಟ್ಸ್ಕ್, ಲುಹಾಂಸ್ಕ್, ಖೆರ್ಸಾನ್ ಮತ್ತು ಝಪೋರಿಝಿಯಾದಲ್ಲಿನ ಉಕ್ರೇನ್ ಪಾಸ್ ಪೋರ್ಟ್ ಹೊಂದಿರುವ ನಿವಾಸಿಗಳಿಗೆ ಈ ಆದೇಶ ಅನ್ವಯಿಸುತ್ತದೆ. ಈ ನಾಲ್ಕು ಪ್ರಾಂತಗಳನ್ನು 2022ರಲ್ಲಿ ಸ್ವಾಧೀನಪಡಿಸಿಕೊಂಡಿರುವುದಾಗಿ ರಶ್ಯ ಪ್ರತಿಪಾದಿಸುತ್ತಿದೆ. ಜೊತೆಗೆ, 2014ರಲ್ಲಿ ವಶಕ್ಕೆ ಪಡೆದಿರುವ ಕ್ರಿಮಿಯಾ ಪ್ರಾಂತದ ನಿವಾಸಿಗಳಿಗೂ ಈ ಆದೇಶ ಅನ್ವಯಿಸುತ್ತದೆ. ಆಕ್ರಮಿತ ಪ್ರದೇಶಗಳ ಉಕ್ರೇನ್ ಪ್ರಜೆಗಳು ರಶ್ಯದ ಪೌರತ್ವ ಪಡೆಯುವಂತೆ ರಶ್ಯ ಇತ್ತೀಚಿನ ದಿನಗಳಲ್ಲಿ ಒತ್ತಡ ಹೆಚ್ಚಿಸುತ್ತಿದೆ. ಈ ಪ್ರದೇಶಗಳಲ್ಲಿ ರಶ್ಯ ಪಾಸ್ ಪೋರ್ಟ್‍ಗಳ ಸಾಮೂಹಿಕ ವಿತರಣೆಯನ್ನು ಕಳೆದ ವರ್ಷವೇ ತಮ್ಮ ಸರಕಾರ ಪೂರ್ಣಗೊಳಿಸಿದೆ ಎಂದು ಪುಟಿನ್ ಹೇಳಿದ್ದಾರೆ. ಈ ಮಧ್ಯೆ, ರಶ್ಯದ `ಪಾಸ್ ಪೋರ್ಟೀಕರಣ' ಪ್ರಕ್ರಿಯೆ ಕಾನೂನುಬಾಹಿರ ಮತ್ತು ಉಕ್ರೇನ್ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಉಕ್ರೇನ್ ಖಂಡಿಸಿದೆ. ಪಾಶ್ಚಿಮಾತ್ಯ ಸರಕಾರಗಳೂ ರಶ್ಯದ ನಡೆಯನ್ನು ಖಂಡಿಸಿದ್ದು ಈ ಪಾಸ್ ಪೋರ್ಟ್‍ಗಳನ್ನು ಕಾನೂನುಬದ್ಧ ದಾಖಲೆಯೆಂದು ಪರಿಗಣಿಸುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ.
ಈ ಮಧ್ಯೆ, ರಶ್ಯ ಮತ್ತು ಉಕ್ರೇನ್ ನಡುವಿನ ಕದನ ವಿರಾಮ ಒಪ್ಪಂದದ ವಿಷಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಜತೆಗೆ ಉತ್ತಮ ಮಾತುಕತೆ ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.