ನಾಲ್ಕು ದೇಶಗಳ 5 ಲಕ್ಷಕ್ಕೂ ಅಧಿಕ ವಲಸಿಗರನ್ನು ಅಮೆರಿಕದಿಂದ ಗಡೀಪಾರು ಮಾಡಲು ಮುಂದಾದ ಟ್ರಂಪ್ ಆಡಳಿತ

Photo | NDTV
ವಾಶಿಂಗ್ಟನ್: ಕ್ಯೂಬಾ, ಹೈಟಿ, ನಿಕರಾಗುವಾ ಮತ್ತು ವೆನೆಜುವೆಲಾದ 5 ಲಕ್ಷಕ್ಕೂ ಅಧಿಕ ವಲಸಿಗರ ತಾತ್ಕಾಲಿಕ ಕಾನೂನು ರಕ್ಷಣೆಯನ್ನು ಡೊನಾಲ್ಡ್ ಟ್ರಂಪ್ ಆಡಳಿತ ಹಿಂತೆಗೆದುಕೊಂಡಿದೆ. ಒಂದು ತಿಂಗಳೊಳಗೆ ಅವರನ್ನು ಗಡೀಪಾರು ಮಾಡಲಾಗುವುದು ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಹೇಳಿದೆ.
2022ರ ಅಕ್ಟೋಬರ್‌ನಿಂದ ಅಮೆರಿಕ ದೇಶಕ್ಕೆ ಬಂದ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಈ ಆದೇಶವು ಅನ್ವಯಿಸುತ್ತದೆ. ಆರ್ಥಿಕ ಪ್ರಾಯೋಜಕರರೊಂದಿಗೆ ಅಮೆರಿಕಕ್ಕೆ ಬಂದಿರುವ ಇವರು ಎರಡು ವರ್ಷ ಅಮೆರಿಕದಲ್ಲಿ ಉಳಿಯಲು ಹಾಗೂ ಕೆಲಸ ಮಾಡಲು ಅರ್ಹರಾಗಿದ್ದರು. ಇವರು ಏಪ್ರಿಲ್ 24ರಂದು ಅಥವಾ ಅಧಿಸೂಚನೆ ಹೊರಬಿದ್ದ 30 ದಿನಗಳಲ್ಲಿ ಅಮೆರಿಕದಲ್ಲಿ ವಾಸಿಸಲು ಮಾನ್ಯತೆ ಕಳೆದುಕೊಳ್ಳಲಿದ್ದಾರೆ ಎಂದು ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ಹೇಳಿದರು.
ಹೊಸ ನೀತಿಯು ಈಗಾಗಲೇ ಯುಎಸ್‌ನಲ್ಲಿರುವವರ ಮತ್ತು ಮಾನವೀಯ ಪೆರೋಲ್ ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಕ್ಕೆ ಬಂದ ಜನರ ಮೇಲೆ ಪರಿಣಾಮ ಬೀರಲಿದೆ. ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಇರುವ ದೇಶಗಳ ಜನರು ಅಮೆರಿಕದಲ್ಲಿ ತಾತ್ಕಾಲಿಕವಾಗಿ ವಾಸಿಸಲು ದೀರ್ಘಕಾಲದಿಂದ ಬಳಸುತ್ತಿರುವ ಕಾನೂನು ಸಾಧನವಾದ ಮಾನವೀಯ ಪೆರೋಲ್‌ನ ದುರುಪಯೋಗವನ್ನು ಕೊನೆಗೊಳಿಸಲು ಟ್ರಂಪ್ ಆಡಳಿತವು ಈ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ.
ಈ ಆದೇಶಕ್ಕೂ ಮುನ್ನ, ಮಾನವೀಯ ಪೆರೋಲ್‌ನಲ್ಲಿ ಬಂದವರು ತಮ್ಮ ಪೆರೋಲ್ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿಯೇ ಉಳಿಯಬಹುದಿತ್ತು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅಕ್ರಮವಾಗಿ ಯುಎಸ್‌ಲ್ಲಿರುವ ಲಕ್ಷಾಂತರ ಜನರನ್ನು ಗಡೀಪಾರು ಮಾಡುವ ಭರವಸೆ ನೀಡಿದ್ದರು.