ಹೀಥ್ರೂ ವಿಮಾನ ನಿಲ್ದಾಣ ಸ್ಥಗಿತ: ಭಾರತದಿಂದ ತೆರಳಿದ ಸಾವಿರಾರು ಪ್ರಯಾಣಿಕರು ಅತಂತ್ರ

Update: 2025-03-22 08:00 IST
ಹೀಥ್ರೂ ವಿಮಾನ ನಿಲ್ದಾಣ ಸ್ಥಗಿತ: ಭಾರತದಿಂದ ತೆರಳಿದ ಸಾವಿರಾರು ಪ್ರಯಾಣಿಕರು ಅತಂತ್ರ

PC: x.com/HeathrowAirport

  • whatsapp icon

ಲಂಡನ್: ಬೆಂಕಿ ಆಕಸ್ಮಿಕ ಮತ್ತು ವಿದ್ಯುತ್ ಸಂಪರ್ಕ ಕಡಿತದ ಪರಿಣಾಮ ಬ್ರಿಟನ್ ನ ಪ್ರಮುಖ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿರುವ ಹೀಥ್ರೂ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಭಾರತದ ವಿವಿಧ ನಗರಗಳಿಂದ ತೆರಳಿದ 19 ದೈನಿಕ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಈ ವಿಮಾನಗಳಲ್ಲಿ ಪ್ರಯಾಣ ಬೆಳೆಸಿದ ಸಾವಿರಾರು ಮಂದಿ ಪ್ರಯಾಣಿಕರು ಪರ್ಯಾಯ ಪ್ರಯಾಣ ಆಯ್ಕೆಗಳಿಲ್ಲದೇ ಅತಂತ್ರರಾಗಿದ್ದಾರೆ.

ಹೀಥ್ರೂ ವಿಮಾನ ನಿಲ್ದಾಣ ತಲುಪಬೇಕಿದ್ದ ಹಾಗೂ ಅಲ್ಲಿಂದ ಭಾರತಕ್ಕೆ ಹೊರಡಬೇಕಿದ್ದ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ ಎಂದು ಏರ್ಇಂಡಿಯಾ ಪ್ರಕಟಿಸಿದೆ. ಒಂದು ವಿಮಾನ ಮುಂಬೈಗೆ ವಾಪಸ್ಸಾಗಿದ್ದರೆ, ದೆಹಲಿಯಿಂದ ಹೊರಟಿದ್ದ ಮತ್ತೊಂದು ವಿಮಾನವನ್ನು ಫ್ರಾಂಕ್ ಫಟ್ ಗೆ ಕಳುಹಿಸಲಾಗಿದೆ. ಉಳಿದ ವಿಮಾನಗಳು ರದ್ದಾಗಿವೆ ಎಂದು ಸ್ಪಷ್ಟಪಡಿಸಿದೆ.

ಸಿರಿಮ್ ವಿಮಾನಯಾನ ವಿಶ್ಲೇಷಣಾ ಕಂಪನಿಯ ಪ್ರಕಾರ, ಏರ್ಇಂಡಿಯಾ ಭಾರತದ ಆರು ನಗರಗಳಿಂದ ಪ್ರತಿದಿನ ವಿಮಾನಗಳು ಹೀಥ್ರೂಗೆ ತೆರಳುತ್ತವೆ. ಒಟ್ಟು 1843 ಪ್ರಯಾಣಿಕರಿಗೆ ಅವಕಾಶ ಇರುತ್ತದೆ. ಆದರೆ ಲಂಡನ್ ಗಾಟ್ವಿಕ್ ಗೆ ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಏರ್ ಇಂಡಿಯಾ ಹೊರತುಪಡಿಸಿ ಬ್ರಿಟಿಷ್ ಏರ್ ವೇಸ್ ನ ಎಂಟು ವಿಮಾನಗಳು ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಹಾಗೂ ಹೈದ್ರಾಬಾದ್ ಹೀಗೆ ಭಾರತೀಯ ವಿಮಾನ ನಿಲ್ದಾಣಗಳು ಹಾಗೂ ಹೀಥ್ರೂ ನಡುವೆ ಕಾರ್ಯಾಚರಣೆ ನಡೆಸುತ್ತಿವೆ. ಈ ಎಲ್ಲ ಸಂಚಾರ ಅಸ್ತವ್ಯಸ್ತಗೊಂಡಿದೆ. ವರ್ಜಿನ್ ಅಟ್ಲಾಂಟಿಕ್ ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ಐದು ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. ಭಾರತದಿಂದ ತೆರಳಬೇಕಿದ್ದ ಎಲ್ಲ ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಜಾಗತಿಕವಾಗಿ 2.86 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುವ 1315 ವಿಮಾನಗಳು ಮಾರ್ಚ್ 20 ಹಾಗೂ 21ರಂದು ಹೀಥ್ರೂಗೆ ತೆರಳಬೇಕಿತ್ತು. ಆದರೆ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ 669 ವಿಮಾನಗಳ ಕನಿಷ್ಠ 1.45 ಲಕ್ಷ ಮಂದಿ ಅತಂತ್ರರಾಗಿದ್ದಾರೆ ಎಂದು ವಿಶ್ವದ ಅತ್ಯಂತ ವಿಶ್ವಾಸಾರ್ಹ ವಾಯುಯಾನ ವಿಶ್ಲೇಷಣೆಯ ಮೂಲವಾದ ಸಿರಿಯಮ್ ಸ್ಪಷ್ಟಪಡಿಸಿದೆ.

ದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಹೀಥ್ರೂಗೆ ತೆರಳಬೇಕಿದ್ದ ಎಲ್ಲ ಆರು ವಿಮಾನಗಳ ಸಂಚಾರ ರದ್ದಾಗಿದೆ. ಹೀಥ್ರೂ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಳಿಸುವ ಮುನ್ನ ಹೊರಟಿದ್ದ ಎರಡು ವಿಮಾನಗಳನ್ನು ಮ್ಯೂನಿಚ್ ಮತ್ತು ಫ್ರಾಂಕ್ ಫರ್ಟ್ಗೆ ಕಳುಹಿಸಲಾಗಿದೆ. ಮುಂಬೈನಿಂದ ಬ್ರಿಟಿಷ್ ಏರ್ ವೇಸ್ನ ಮೂರು ದೈನಿಕ ವಿಮಾನಗಳು, ಏರ್ ಇಂಡಿಯಾ ಮತ್ತು ವರ್ಜಿನ್ ಅಟ್ಲಾಂಟಿಕ್ ನ ತಲಾ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈ ಪೈಕಿ ಒಂದು ವಿಮಾನ ಮೂಲಕ್ಕೆ ಮರಳಿದೆ. ಬೆಂಗಳೂರಿನಿಂದ ಹೊರಡಬೇಕಿದ್ದ ಐದು ವಿಮಾನಗಳ ಸಂಚಾರ ವ್ಯತ್ಯಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News