ಕಮಲಾ ಹ್ಯಾರಿಸ್, ಹಿಲರಿ ಕ್ಲಿಂಟನ್‌ರ ಭದ್ರತಾ ಅನುಮತಿ ಹಿಂಪಡೆದ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (PTI)
ಬ್ರಿಜ್‌ವಾಟರ್, ನ್ಯೂಜೆರ್ಸಿ: ಅಮೆರಿಕದ ಮಾಜಿ ಉಪಾಧ್ಯಕ್ಷೆ ಹಿಲರಿ ಕ್ಲಿಂಟನ್ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂಪಡೆದಿದ್ದಾರೆ. ಆ ಮೂಲಕ, ತಮ್ಮ ವಿರೋಧಿಯಾದ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧದ ತಮ್ಮ ಕ್ರಮವನ್ನು ಮುಂದುವರಿಸಿದ್ದಾರೆ.
ಈ ಹಿಂದೆ, ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ರಿಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನೂ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಿದ್ದರು.
ಈ ಕುರಿತು ಶುಕ್ರವಾರ ರಾತ್ರಿ ಪ್ರಕಟನೆ ಬಿಡುಗಡೆ ಮಾಡಿರುವ ಡೊನಾಲ್ಡ್ ಟ್ರಂಪ್, "ಈ ಕೆಳಕಂಡ ವ್ಯಕ್ತಿಗಳು ರಹಸ್ಯ ಮಾಹಿತಿ ಪಡೆಯುವುದರಲ್ಲಿ ಯಾವುದೇ ರಾಷ್ಟ್ರೀಯ ಹಿತಾಸಕ್ತಿ ಅಡಗಿಲ್ಲ ಎಂದು ನಾನು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ. ಈ ಪಟ್ಟಿಯಲ್ಲಿ ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರ ಹೆಸರೂ ಸೇರಿದೆ.
ಡೊನಾಲ್ಡ್ ಟ್ರಂಪ್‌ರ ಈ ನಿರ್ಧಾರದಿಂದ ತಕ್ಷಣದಲ್ಲಿ ಯಾವುದೇ ಪರಿಣಾಮವಾಗದಿದ್ದರೂ, ತಮ್ಮ ವಿರೋಧಿಗಳ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಅವರ ಕ್ರಮ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದಲ್ಲದೆ, ಟ್ರಂಪ್ ಅವರ ಕಟು ಟೀಕಾಕಾರರಾದ ರಿಪಬ್ಲಿಕನ್ ಪಕ್ಷದ ಸಂಸದ ಲಿಜ್ ಚೆನೆ, ಶ್ವೇತಭವನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲ್ಲಿವನ್, ಟ್ರಂಪ್ ಅವರ ಪ್ರಥಮ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ರಶ್ಯ ತಜ್ಞರಾಗಿ ಕಾರ್ಯನಿರ್ವಹಿಸಿದ್ದ ಫಿಯೊನಾ ಹಿಲ್, ರಾಷ್ಟ್ರೀಯ ಭದ್ರತಾ ವಕೀಲ ಮಾರ್ಕ್ ಝೈದ್, ರಿಪಬ್ಲಿಕನ್ ಪಕ್ಷದ ಮಾಜಿ ಸಂಸದ ಆ್ಯಡಂ ಕಿನ್‌ಜಿಂಗರ್ ಅವರಿಗೆ ನೀಡಲಾಗಿದ್ದ ಭದ್ರತಾ ಅನುಮತಿಗಳನ್ನೂ ಹಿಂಪಡೆಯಲಾಗಿದೆ.
ಆಮೆರಿಕದ ಮಾಜಿ ಅಧ್ಯಕ್ಷರು ಸಾಂಪ್ರದಾಯಿಕವಾಗಿ ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸುತ್ತಿದ್ದರು. ಅವುಗಳ ಆಧಾರದಲ್ಲಿ ಅವರು ಹಾಲಿ ಅಧ್ಯಕ್ಷರಿಗೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಬಗ್ಗೆ ಸಲಹೆ ನೀಡಬಹುದಾಗಿತ್ತು.
2021ರಲ್ಲಿ ಜೋ ಬೈಡನ್ ಕೂಡಾ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನು ಹಿಂಪಡೆದಿದ್ದರು.