ಲೆಬನಾನ್ ಕಡೆಯಿಂದ ಇಸ್ರೇಲ್ ನತ್ತ ರಾಕೆಟ್ ದಾಳಿ: ಇಸ್ರೇಲ್ ಪ್ರತಿದಾಳಿಯಲ್ಲಿ ಇಬ್ಬರು ಮೃತ್ಯು

Update: 2025-03-22 21:12 IST
ಲೆಬನಾನ್ ಕಡೆಯಿಂದ ಇಸ್ರೇಲ್ ನತ್ತ ರಾಕೆಟ್ ದಾಳಿ: ಇಸ್ರೇಲ್ ಪ್ರತಿದಾಳಿಯಲ್ಲಿ ಇಬ್ಬರು ಮೃತ್ಯು

PC : NDTV 

  • whatsapp icon

ಬೈರೂತ್: ಲೆಬನಾನ್ ಗಡಿಯಾಚೆಗಿಂದ ನಡೆದ ರಾಕೆಟ್ ದಾಳಿಗೆ ಪ್ರತಿಯಾಗಿ ದಕ್ಷಿಣ ಲೆಬನಾನ್ ನ ಟೌಲೈನ್ ನಗರದ ಮೇಲೆ ಇಸ್ರೇಲ್ ನಡೆಸಿದ ಮಾರಣಾಂತಿಕ ವೈಮಾನಿಕ ದಾಳಿಯಲ್ಲಿ ಬಾಲಕಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಲೆಬನಾನ್ ನ `ನ್ಯಾಷನಲ್ ನ್ಯೂಸ್ ಏಜೆನ್ಸಿ' ಶನಿವಾರ ವರದಿ ಮಾಡಿದೆ.

ಲೆಬನಾನ್ ಗಡಿಯಾಚೆಗಿಂದ ಉತ್ತರ ಇಸ್ರೇಲ್ ನತ್ತ ಮೂರು ರಾಕೆಟ್ಗಳನ್ನು ಪ್ರಯೋಗಿಸಲಾಗಿದ್ದು ಮೂರನ್ನೂ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ರಾಕೆಟ್ ದಾಳಿಯ ಹೊಣೆ ವಹಿಸಲು ಹಿಜ್ಬುಲ್ಲಾ ನಿರಾಕರಿಸಿದೆ. `ದಕ್ಷಿಣ ಲೆಬನಾನ್ ನಿಂದ ಆಕ್ರಮಿತ ಫೆಲೆಸ್ತೀನ್ ಪ್ರದೇಶದತ್ತ ನಡೆದ ರಾಕೆಟ್ ದಾಳಿಯಲ್ಲಿ ನಾವು ಒಳಗೊಂಡಿಲ್ಲ. ಇಸ್ರೇಲ್ ನ ಆರೋಪ ಲೆಬನಾನ್ ಮೇಲೆ ದಾಳಿ ನಡೆಸಲು ನೆಪವಾಗಿದೆ. ಲೆಬನಾನ್ ಮೇಲಿನ ಇಸ್ರೇಲ್ ನ ಅಪಾಯಕಾರಿ ಉಲ್ಬಣವನ್ನು ಪರಿಹರಿಸಲು ಲೆಬನಾನ್ ಸರಕಾರದ ಜತೆ ನಿಲ್ಲುತ್ತೇವೆ ' ಎಂದು ಹಿಜ್ಬುಲ್ಲಾ ವಕ್ತಾರರು ಹೇಳಿದ್ದಾರೆ.

ಹಲವು ತಿಂಗಳ ಪ್ರಶಾಂತತೆ ಬಳಿಕ ದೇಶವನ್ನು ಹೊಸ ಯುದ್ಧಕ್ಕೆ ಎಳೆದುತರುವ ಅಪಾಯ ಎದುರಾಗಿದೆ ಎಂದು ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ `ರಾಕೆಟ್ಗಳನ್ನು ಪ್ರಯೋಗಿಸಿದ್ದು ಯಾರೇ ಆಗಿರಲಿ, ತನ್ನ ನೆಲದಿಂದ ನಡೆದಿರುವ ಇಂತಹ ದ್ವೇಷಕಾರ್ಯಕ್ಕೆ ಲೆಬನಾನ್ ಸರಕಾರವನ್ನು ಹೊಣೆಯಾಗಿಸುತ್ತೇವೆ' ಎಂದಿದೆ.

ತನ್ನ ಭೂಭಾಗದಿಂದ ನಡೆಯುವ ದಾಳಿಗಳಿಗೆ ಲೆಬನಾನ್ ಸರಕಾರ ಹೊಣೆ ಹೊರಬೇಕು. ಈ ದಾಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲು ಸೇನೆಗೆ ಆದೇಶಿಸಿದ್ದೇನೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಹೇಳಿದ್ದಾರೆ. ರಾಕೆಟ್ ದಾಳಿಗೆ ಮಿಲಿಟರಿ ತೀವ್ರ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಇಯಾಲ್ ಝಾಮಿರ್ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಲೆಬನಾನ್ ನ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಶನಿವಾರ ಬೆಳಿಗ್ಗೆ ನಡೆದ ರಾಕೆಟ್ ದಾಳಿಯ ಬಳಿಕದ ಬೆಳವಣಿಗೆ ಹಿಂಸಾಚಾರವನ್ನು ಉಲ್ಬಣಿಸುವ ಅಪಾಯಕ್ಕೆ ಕಾರಣವಾಗಿದೆ. ಆದ್ದರಿಂದ ಎಲ್ಲಾ ಕಡೆಯವರೂ ಗರಿಷ್ಠ ಸಂಯಮ ವಹಿಸಿ ನಾಗರಿಕರ ಸಾವು-ನೋವನ್ನು ತಡೆಯಲು ನೆರವಾಗಬೇಕು ಎಂದು ಲೆಬನಾನ್ ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಆಗ್ರಹಿಸಿದೆ.

ನವೆಂಬರ್ನಲ್ಲಿ ಸಹಿ ಹಾಕಲಾದ ಕದನ ವಿರಾಮ ಒಪ್ಪಂದದ ಪ್ರಕಾರ ಜನವರಿ ಅಂತ್ಯದೊಳಗೆ ಲೆಬನಾನ್ ನ ಪ್ರದೇಶದಿಂದ ಇಸ್ರೇಲ್ ಪಡೆ ಹಿಂದಕ್ಕೆ ಸರಿಯಬೇಕಿದೆ. ಆದರೆ ಲೆಬನಾನ್ ಮತ್ತು ಇಸ್ರೇಲ್ ನಡುವಿನ ಒಪ್ಪಂದದ ಬಳಿಕ ಈ ಗಡುವನ್ನು ಫೆಬ್ರವರಿ 18ಕ್ಕೆ ವಿಸ್ತರಿಸಲಾಗಿದೆ. ಆದರೆ ಫೆಬ್ರವರಿ 18ರ ಬಳಿಕವೂ ಲೆಬನಾನ್ ನ ಐದು ಪ್ರದೇಶಗಳಲ್ಲಿ ಇಸ್ರೇಲ್ ಸೇನೆಯ ಉಪಸ್ಥಿತಿ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News