ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ; ಭೂಮಿಗೆ ಮರಳಲು ಕ್ಷಣಗಣನೆ

Photo : NASA
ವಾಶಿಂಗ್ಟನ್: ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಒಂಭತ್ತು ತಿಂಗಳ ಗಮನಾರ್ಹ ಕಾರ್ಯಾಚರಣೆಯ ನಂತರ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ರಾಫ್ಟ್ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಿಂದ ನಿರ್ಗಮಿಸಿದರು. ಆ ಮೂಲಕ ಅವರು ಭೂಮಿಗೆ ಮರಳಲು ಕ್ಷಣಗಣನೆ ಪ್ರಾರಂಭವಾಗಿದೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಮರು ಪ್ರಯಾಣವು ಮಂಗಳವಾರದಂದು ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಾರಂಭವಾಗಿದೆ. ಸಹ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಈ ಪ್ರಯಾಣದಲ್ಲಿ ಜೊತೆಯಾಗಿದ್ದಾರೆ.
ಗಗನಯಾತ್ರಿಗಳು ಮಂಗಳವಾರ ಬೆಳಿಗ್ಗೆ ಬಾಹ್ಯಾಕಾಶ ನೌಕೆಯನ್ನು ಪ್ರವೇಶಿಸುತ್ತಿದ್ದಂತೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ಸೂಟ್ ಧರಿಸಿದರು. ಕ್ರೂ-10 ಗಗನಯಾತ್ರಿಗಳು ನೌಕೆ ಮುಚ್ಚುವ ಮೊದಲು ವಿದಾಯ ಹೇಳಿದರು.
ವಿಲಿಯಮ್ಸ್ ಮತ್ತು ವಿಲ್ಮೋರ್ ಜೂನ್ 5, 2024 ರಂದು ಬೋಯಿಂಗ್ ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿಯ ಪರೀಕ್ಷಾ ಹಾರಾಟದ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ಪ್ರೊಪಲ್ಷನ್ ಸಿಸ್ಟಮ್ ಅಸಮರ್ಪಕ ಕಾರ್ಯ ನಿರ್ವಹಣೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳಿಂದ ಅವರ ಸಕಾಲಿಕ ಮರಳುವಿಕೆ ವಿಳಂಬವಾಯಿತು. ಸೆಪ್ಟೆಂಬರ್ 2024 ರಲ್ಲಿ ಸ್ಟಾರ್ಲೈನರ್ ಅನ್ನು ಸಿಬ್ಬಂದಿಗಳಿಲ್ಲದೆ ಭೂಮಿಗೆ ವಾಪಾಸ್ ಕಳುಹಿಸಿದಾಗ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಉಳಿಯಬೇಕಾಯಿತು.
ಈ ಅನಿರೀಕ್ಷಿತ ವಿಳಂಬದಿಂದ ಅವರು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿದ್ದಾಗ 150 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳಿಗೆ ಅವಕಾಶ ಮಾಡಿಕೊಟ್ಟರು.