ಹೊಂಡುರಾಸ್ | ಟೇಕ್ ಆಫ್ ಬೆನ್ನಲ್ಲೇ ಸಮುದ್ರದಲ್ಲಿ ವಿಮಾನ ಪತನ; ಆರು ಮಂದಿ ಮೃತ್ಯು

Photo: x/@aviationbrk
ಟೆಗುಸಿಗಲ್ಪಾ: ಲ್ಯಾಟಿನ್ ಅಮೆರಿಕದ ಹೊಂಡುರಾಸ್ ಕರಾವಳಿಯ ಸಮೀಪವಿರುವ ರೋಟನ್ ದ್ವೀಪದಿಂದ ವಿಮಾನವೊಂದು ಟೇಕ್ ಆಫ್ ಆದ ಬೆನ್ನಲ್ಲೇ ಪತನವಾಗಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಗ್ನಿಶಾಮಕದಳದ ಮುಖ್ಯಸ್ಥರು ಸೋಮವಾರ ತಡರಾತ್ರಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಂಟು ಪ್ರಯಾಣಿಕರು ಇನ್ನೂ ವಿಮಾನದೊಳಗೆ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಮುದ್ರಕ್ಕೆ ಬಿದ್ದು ಪತನಗೊಂಡಿದೆ. ವಿಮಾನ ಸಮುದ್ರಕ್ಕೆ ಬಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ ಎಂದು ದ್ವೀಪದ ಪೊಲೀಸ್ ಮುಖ್ಯಸ್ಥ ಲಿಸಾಂಡ್ರೊ ಹೇಳಿದ್ದಾರೆ.
ಹೊಂಡುರಾಸ್ ನ ಲನ್ಹ್ಸಾ ನಿರ್ವಹಿಸುತ್ತಿದ್ದ ಜೆಟ್ಸ್ಟ್ರೀಮ್ ವಿಮಾನವು ಮೂವರು ಸಿಬ್ಬಂದಿ ಸೇರಿದಂತೆ 17 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ದೇಶದ ಸಾರಿಗೆ ಸಚಿವರು ಸ್ಥಳೀಯ ರೇಡಿಯೊಗೆ ತಿಳಿಸಿದ್ದಾರೆ.
ವಿಮಾನವು ಹೊಂಡುರಾಸ್ ನ ಮುಖ್ಯ ಭೂಭಾಗದಲ್ಲಿರುವ ಲಾ ಸೀಬಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಪ್ರಯಾಣಿಕರಲ್ಲಿ ಒಬ್ಬ ಅಮೆರಿಕದ ಪ್ರಜೆ, ಒಬ್ಬ ಫ್ರೆಂಚ್ ಪ್ರಜೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.