ಅಮೆರಿಕ | ಪುತ್ರಿ ಮೃತಪಟ್ಟಿದ್ದಾಳೆಂದು ಘೋಷಿಸುವಂತೆ ಸುದೀಕ್ಷಾ ಕೊನಾಂಕಿ ಪೋಷಕರ ಮನವಿ: ವರದಿ

Photo : Facebook/Sudiksha Konanki
ನ್ಯೂಯಾರ್ಕ್: ಮಾರ್ಚ್ 6ರಿಂದ ನಾಪತ್ತೆಯಾಗಿರುವ 20 ವರ್ಷದ ಭಾರತೀಯ ವಿದ್ಯಾರ್ಥಿನಿ ಸುದೀಕ್ಷಾ ಕೊನಾಂಕಿ ಮೃತಪಟ್ಟಿದ್ದಾಳೆ ಎಂದು ಘೋಷಿಸುವಂತೆ ಡೊಮಿನಿಕನ್ ರಿಪಬ್ಲಿಕ್ ನ ಪೊಲೀಸರಿಗೆ ಆಕೆಯ ಪೋಷಕರು ಮನವಿ ಮಾಡಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ಪ್ರಜೆ ಹಾಗೂ ಅಮೆರಿಕದ ಖಾಯಂ ನಿವಾಸಿಯಾದ ಸುದೀಕ್ಷಾ ಕೊನಾಂಕಿ ಮಾರ್ಚ್ 6ರಂದು ಪುಂಟಾ ಕಾನಾ ಪಟ್ಟಣದ ರಿಯು ರಿಪಬ್ಲಿಕ್ ರೆಸಾರ್ಟ್ ನಲ್ಲಿ ಕಡೆಯದಾಗಿ ಕಂಡು ಬಂದಿದ್ದರು. ನಂತರ, ಡೊಮಿನಿಕನ್ ರಿಪಬ್ಲಿಕ್ ಗೆ ರಜಾದಿನಗಳನ್ನು ಕಳೆಯಲೆಂದು ತೆರಳಿದ್ದಾಗ, ಆಕೆ ನಾಪತ್ತೆಯಾಗಿದ್ದರು. ಆಕೆಯ ನಾಪತ್ತೆ ಕುರಿತು ಕೆರೆಬಿಯನ್ ದೇಶವಾದ ಡೊಮಿನಿಕನ್ ರಿಪಬ್ಲಿಕ್ ನ ಪ್ರಾಧಿಕಾರಗಳೊಂದಿಗೆ ಅಮೆರಿಕ ಕಾನೂನು ಜಾರಿ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ವ್ಯಾಪಕ ಶೋಧಗಳ ಹೊರತಾಗಿಯೂ, ಆಕೆಯ ಮೃತ ದೇಹವಿನ್ನೂ ಪತ್ತೆಯಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರೀಯ ಪೊಲೀಸ್ ವಕ್ತಾರ ಡಿಯಾಗೊ ಪೆಸ್ಕ್ವೈರಾ, ತಮ್ಮ ಪುತ್ರಿ ಮೃತಪಟ್ಟಿದ್ದಾಳೆ ಎಂದು ಘೋಷಿಸಬೇಕು ಎಂದು ಕೋರಿ ಸುದೀಕ್ಷಾ ಕೊನಾಂಕಿಯ ಪೋಷಕರು ನಮಗೆ ಪತ್ರ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮಂಗಳವಾರ NBC ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಈ ವರದಿಗಳ ಕುರಿತು ಕೊನಾಂಕಿ ಕುಟುಂಬದ ಸದಸ್ಯರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.