ಪಾಕ್ ಟೆಸ್ಟ್ ಕ್ರಿಕೆಟ್ ಕೋಚ್ ಹುದ್ದೆಗೆ ಗಿಲೆಸ್ಪಿ ರಾಜೀನಾಮೆ
ಇಸ್ಲಾಮಾಬಾದ್: ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲೆಸ್ಪಿ ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಬಗೆಗಿನ ಹತಾಶೆಯಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಗಿಲೆಸ್ಪಿ ರಾಜೀನಾಮೆಯನ್ನು ಪಿಸಿಬಿ ದೃಢಪಡಿಸಿದ್ದು, ರಾಷ್ಟ್ರೀಯ ಕ್ರಿಕೆಟ್ ವ್ಯವಸ್ಥೆಯ ಸಂಕಷ್ಟ ಮತ್ತಷ್ಟು ಉಲ್ಬಣಗೊಂಡಿದೆ.
"ಜೇಸನ್ ಗಿಲೆಸ್ಪಿ ರಾಜೀನಾಮೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ವೇಗದ ಬೌಲರ್ ಅಕೀಬ್ ಜಾವೇದ್ ಅವರನ್ನು ಹಂಗಾಮಿ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ" ಎಂದು ಪಿಸಿಪಿ ಪ್ರಕಟಿಸಿದೆ. ಕಳೆದ ಅಕ್ಟೋಬರ್ ನಲ್ಲಿ ಗ್ಯಾರಿ ಕ್ರಿಸ್ಟನ್ ಏಕದಿನ ತಂಡದ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಏಕದಿನ ತಂಡದ ಹಂಗಾಮಿ ಕೋಚ್ ಆಗಿ ಜಾವೇದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಸೆಂಬರ್ 26ರಿಂದ ಸೆಂಚೂರಿಯನ್ ನಲ್ಲಿ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ತಂಡವನ್ನು ಜಾವೇದ್ ಮುನ್ನಡೆಸಲಿದ್ದಾರೆ.
ಗಿಲೆಸ್ಪಿಯವರ ಸಹಾಯಕ ಟಿಮ್ ನೀಲ್ಸನ್ ಅವರ ಗುತ್ತಿಗೆ ನವೀಕರಣಕ್ಕೆ ನಿರಾಕರಿಸಿರುವುದು ಸೇರಿದಂತೆ ಪಿಸಿಬಿ ಕ್ರಮಗಳನ್ನು ವಿರೋಧಿಸುತ್ತಲೇ ಬಂದಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಅಂತಿಮವಾಗಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಿಲೆಸ್ಪಿ ತಮ್ಮ ಹತಾಶೆಯನ್ನು ಪ್ರಕಟಿಸಿದ್ದರು.