ಹಾರ್ಡ್ ವೇರ್, ಧ್ವನಿ ನೆರವು ವಿಭಾಗಗಳ ಸಿಬ್ಬಂದಿಯನ್ನು ವಜಾಗೊಳಿಸಿದ ಗೂಗಲ್
ಹೊಸದಿಲ್ಲಿ: ತನ್ನ ಹಾರ್ಡ್ ವೇರ್, ಧ್ವನಿ ನೆರವು ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿ ಸಿಬ್ಬಂದಿಯನ್ನು ಗೂಗಲ್ ವಜಾಗೊಳಿಸಿದೆ.
ತನ್ನ ಅತಿದೊಡ್ಡ ಆದ್ಯತೆಗಳನ್ನು ಜವಾಬ್ದಾರಿಯುತವಾಗಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಮತ್ತು ಮುಂದೆ ಮಹತ್ವದ ಅವಕಾಶಗಳು ಇರುವ ಹಿನ್ನೆಲೆಯಲ್ಲಿ ವೆಚ್ಚ ಕಡಿತ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. "ಕೆಲ ತಂಡಗಳು ಈ ಬಗೆಯ ಸಾಂಸ್ಥಿಕ ಬದಲಾವಣೆಯನ್ನು ಮಾಡಬೇಕಾಗುತ್ತವೆ. ಇದರಲ್ಲಿ ಜಾಗತಿಕವಾಗಿ ಕೆಲ ಹೊಣೆಗಳನ್ನು ರದ್ದುಪಡಿಸುವುದೂ ಸೇರಿದೆ" ಎಂದು ಪ್ರಕಟಣೆಯಲ್ಲಿ ಗೂಗಲ್ ತಿಳಿಸಿದೆ.
ನೂರಾರು ಹೊಣೆಗಳನ್ನು ರದ್ದುಪಡಿಸಲಾಗಿದೆ ಎಂದು ಗೂಗಲ್ ಈ ಮೊದಲು ಹೇಳಿಕೆ ನೀಡಿದ್ದು, ಆಗ್ಯುಮೆಂಟೆಡ್ ರಿಯಾಲ್ಟಿ ಹಾರ್ಡ್ವೇರ್ ತಂಡದ ಬಹಳಷ್ಟು ಮಂದಿಗೆ ಇದರ ಬಿಸಿ ತಟ್ಟಿದೆ. ಈ ಉದ್ಯೋಗ ಕಡಿತದ ಬೆನ್ನಲ್ಲೇ ಹಲವು ಮಂದಿ ಗೂಗಲ್ ಹಾಗೂ ಮಾತೃಸಂಸ್ಥೆಯಾದ ಅಲ್ಫಾಬೆಟ್ ಎಕ್ಸಿಕ್ಯೂಟಿವ್ ಗಳು ವೆಚ್ಚ ಕಡಿತಕ್ಕೆ ಮುಂದಾಗಿದ್ದಾರೆ. ತನ್ನ ಒಟ್ಟು ಉದ್ಯೋಗಬಲದಲ್ಲಿ ಶೇಕಡ 6ರಷ್ಟು ಅಂದರೆ 12 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಕಳೆದ ವರ್ಷ ಗೂಗಲ್ ಪ್ರಕಟಿಸಿತ್ತು.
ಮತ್ತೊಂದು ಹಂತದ ಅನಗತ್ಯ ಉದ್ಯೋಗ ಕಡಿತ ಮಾಡಲಾಗಿದೆ ಎಂದು ಅಲ್ಫಾಬೆಟ್ ಉದ್ಯೋಗಿಗಳ ಸಂಘ ಈ ಕ್ರಮವನ್ನು ಟೀಕಿಸಿದೆ. ನಮ್ಮ ಉದ್ಯೋಗಗಳು ಸುರಕ್ಷಿತವಾಗುವವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಉದ್ಯೋಗಿ ಸಂಘ ಎಚ್ಚರಿಕೆ ನೀಡಿದೆ.