ಡಿಸೆಂಬರ್‌ ತಿಂಗಳಲ್ಲಿ ನಿಷ್ಕ್ರಿಯ ಖಾತೆಗಳನ್ನು ಅಳಿಸಿ ಹಾಕಲಿರುವ ಗೂಗಲ್

Update: 2023-11-28 08:14 GMT

ಸಾಂದರ್ಭಿಕ ಚಿತ್ರ (Credit: Pixabay)

ನ್ಯೂಯಾರ್ಕ್: ನೀವು ತುಂಬಾ ದಿನಗಳಾದರೂ ಒಂದು ಬಾರಿಯೂ ಬಳಸದಿರುವ ಗೂಗಲ್ ಖಾತೆ ಇದೆಯೆ? ಅದು ಕಾಣೆಯಾಗದಿರಬೇಕಾದರೆ, ನೀವು ಈ ವಾರಾಂತ್ಯದೊಳಗೆ ಅಂತಹ ಖಾತೆಗೆ ಸೈನ್ ಇನ್ ಮಾಡಬೇಕು.

ಕಳೆದ ಮೇ ತಿಂಗಳಲ್ಲಿ ಪ್ರಕಟಿಸಲಾಗಿದ್ದ ಗೂಗಲ್ ನ ಪರಿಷ್ಕೃತ ನಿಷ್ಕ್ರಿಯ ಖಾತೆ ನೀತಿಯ ಅನ್ವಯ, ಕನಿಷ್ಠ ಎರಡು ವರ್ಷಗಳಿಂದ ಬಳಸಲಾಗಿರದ ಖಾತೆಗಳನ್ನು ಅಳಿಸಿ ಹಾಕಬಹುದಾಗಿದೆ. ನಿಷ್ಕ್ರಿಯ ಎಂದು ಪರಿಗಣಿಸಲಾಗುವ ಖಾತೆಗಳನ್ನು ಶುಕ್ರವಾರದಿಂದ ಅಳಿಸಿ ಹಾಕಲಾಗುತ್ತದೆ.

ನಿಮ್ಮ ಖಾತೆ ಏನಾದರೂ ನಿಷ್ಕ್ರಿಯ ಎಂದು ಪರಿಗಣನೆಗೆ ಒಳಗಾಗಿದ್ದರೆ ಹಾಗೂ ಅಳಿಸಿ ಹಾಕುವ ಅಪಾಯವನ್ನು ಎದುರಿಸುತ್ತಿದ್ದರೆ, ಅಂತಹ ಖಾತೆಗೆ ಜೋಡಣೆಯಾಗಿರುವ ಅಥವಾ ಪುನಶ್ಚೇತನಗೊಳಿಸಲು ಬಳಸಲಾಗುವ ಖಾತೆಯೊಂದಕ್ಕೆ (ಈ ಪೈಕಿ ಯಾವುದಾದರೂ ಒಂದು ಅಸ್ತಿತ್ವದಲ್ಲಿದ್ದರೂ) ಗೂಗಲ್ ರವಾನಿಸಿರುವ ಇಮೇಲ್ ಸ್ವೀಕೃತಗೊಂಡಿರಬೇಕು. ಈ ನೂತನ ನೀತಿಯ ಬಗ್ಗೆ ನಿಮಗಿನ್ನೂ ಗೊಂದಲವಿದ್ದರೆ, ಗೂಗಲ್ ಡ್ರೈವ್, ಡಾಕ್ಯುಮೆಂಟ್ಸ್, ಜಿಮೇಲ್ ಹಾಗೂ ಇನ್ನಿತರ ಕಡೆ ರಕ್ಷಿಸಲ್ಪಟ್ಟಿರುವ ಕಡತಗಳು ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ನೀವು ಈ ಕೆಳಕಂಡಂತೆ ಮಾಡಬೇಕಿದೆ.

ಗೂಗಲ್ ಏಕೆ ನಿಷ್ಕ್ರಿಯ ಖಾತೆಗಳನ್ನು ಅಳಿಸಿ ಹಾಕುತ್ತಿದೆ?

ಮಂಗಳವಾರ ಪ್ರಕಟಿಸಿದ್ದ ತನ್ನ ನೂತನ ನೀತಿಯ ಪ್ರಕಾರ, ಭದ್ರತಾ ಸಮಸ್ಯೆಗಳ ಕಾರಣಕ್ಕೆ ನಿಷ್ಕ್ರಿಯ ಖಾತೆಗಳನ್ನು ಪರಿಷ್ಕರಣೆಗೊಳಪಡಿಸಬೇಕಿದೆ ಎಂದು ಗೂಗಲ್ ಹೇಳಿತ್ತು.

ಸುದೀರ್ಘ ಕಾಲ ಬಳಕೆಯಲ್ಲಿರದ ಖಾತೆಗಳು ರಾಜಿಗೊಳಗಾಗುವ ಸಾಧ್ಯತೆ ಇರುವುದರಿಂದ, “ಮರೆತು ಹೋದ ಅಥವಾ ಗಮನಿಸದ ಖಾತೆಗಳು ಬಹುತೇಕ ಹಳೆಯ ಪಾಸ್ ವರ್ಡ್ ಗಳನ್ನು ಹೊಂದಿರುತ್ತವೆ ಹಾಗೂ ಎರಡು ಬಾರಿ ದೃಢೀಕರಣಗೊಳ್ಳದೆ ಇರುವುದರಿಂದ ಕೆಲವು ಭದ್ರತಾ ಅಪಾಯಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ, ಈ ಖಾತೆಗಳನ್ನು ಕನ್ನಗಳವು ಮಾಡಿ, ಸ್ಪ್ಯಾಮ್ ಅಥವಾ ಗುರುತಿನ ಕಳವಿನಂಥ ಇನ್ನಿತರ ದುರದ್ದೇಶಪೂರಿತ ಕೆಲಸಗಳಿಗೆ ಬಳಸಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ” ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ನಿಮ್ಮ ಖಾತೆಯು ಅಳಿಸಿ ಹೋಗದಂತೆ ನೀವು ಹೇಗೆ ತಡೆಯಬಹುದು?

ನಿಮ್ಮ ಗೂಗಲ್ ಖಾತೆಯು ಸಕ್ರಿಯವಾಗಿರಬೇಕಾದರೆ (ಮತ್ತು ಆ ಮೂಲಕ ಅಳಿಸಿ ಹೋಗುವುದನ್ನು ತಡೆಯಬೇಕಿದ್ದರೆ) ನೀವು ಕನಿಷ್ಠ ಪಕ್ಷ ಎರಡು ವರ್ಷಕ್ಕೊಮ್ಮೆ ಆ ಖಾತೆಗೆ ಸೈನ್ ಇನ್ ಆಗುವುದು ಸುಲಭ ಮಾರ್ಗವಾಗಿದೆ.

ಈ ನೀತಿಗೆ ವಿನಾಯತಿಗಳೇನಾದರೂ ಇದೆಯೆ?

ನಿಷ್ಕ್ರಿಯ ಖಾತೆ ಪರಿಷ್ಕರಣೆ ನೀತಿಯನ್ವಯ ಕೇವಲ ವೈಯಕ್ತಿಕ ಗೂಗಲ್ ಖಾತೆಗಳು ಮಾತ್ರ ಎರಡು ವರ್ಷಕ್ಕಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದರೆ ಬಾಧಿತವಾಗಲಿವೆ. ಶಾಲೆಗಳು ಅಥವಾ ಕಂಪನಿಗಳಂಥ ಸಂಘ-ಸಂಸ್ಥೆಗಳ ಗೂಗಲ್ ಖಾತೆಗಳು ಈ ನೀತಿಯಿಂದ ಬಾಧಿತವಾಗುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News