ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರೆ ಮಾತ್ರ ಕದನವಿರಾಮ | ಬೈಡನ್ ಹೇಳಿಕೆ ಖಂಡಿಸಿದ ಹಮಾಸ್
ವಾಷಿಂಗ್ಟನ್ : ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರೆ ಮಾತ್ರ ಗಾಝಾದಲ್ಲಿ ಕದನ ವಿರಾಮ ಸಾಧ್ಯವಾಗಬಹುದು ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆಯನ್ನು ಹಮಾಸ್ ಖಂಡಿಸಿದೆ.
`ಗಾಝಾದಲ್ಲಿ ಕದನ ವಿರಾಮವು ಗಾಝಾಪಟ್ಟಿಯಲ್ಲಿ ಹಮಾಸ್‍ನ ಒತ್ತೆಸೆರೆಯಲ್ಲಿ ಇರುವವರ ಬಿಡುಗಡೆಯನ್ನು ಅವಲಂಬಿಸಿದೆ ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಹೇಳಿಕೆಯಿಂದ ನಿರಾಶೆಯಾಗಿದೆ. ಅಮೆರಿಕ ಅಧ್ಯಕ್ಷರ ಈ ನಿಲುವನ್ನು ನಾವು ಖಂಡಿಸುತ್ತೇವೆ. ಇದು ಕದನ ವಿರಾಮ ಒಪ್ಪಂದದ ಕುರಿತ ಹೊಸ ಮಾತುಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆʼ ಎಂದು ಹಮಾಸ್ ಹೇಳಿರುವುದಾಗಿ `ಪ್ರೆಸ್ ಟಿವಿ' ವರದಿ ಮಾಡಿದೆ.
ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯಲ್ಲಿ ಮುಂದಿರಿಸಲಾದ ಪ್ರಸ್ತಾವನೆಯನ್ನು ನಾವು ಒಪ್ಪಿದ್ದೇವೆ. ಮಾತುಕತೆ ಯಶಸ್ವಿಯಾಗಬೇಕಿದ್ದರೆ ಎರಡೂ ಕಡೆಯವರು ತಮ್ಮ ನಿಲುವನ್ನು ತುಸು ಸಡಿಲಿಸಬೇಕಾಗುತ್ತದೆ. ಆದರೆ ನೆತನ್ಯಾಹು ಮತ್ತವರ ಸಚಿವ ಸಂಪುಟ, ರಫಾ, ಜಬಾಲಿಯಾ ಮತ್ತು ಗಾಝಾದ ನಮ್ಮ ಜನರ ಮೇಲೆ ಆಕ್ರಮಣ ನಡೆಸುವ ಮೂಲಕ ಮಾತುಕತೆಯ ಗತಿಯನ್ನು ಹಿಮ್ಮೆಟ್ಟಿಸಿದೆ ಎಂದು ಹಮಾಸ್ ಹೇಳಿದೆ.
ಗಾಝಾದಲ್ಲಿನ ಆಕ್ರಮಣವನ್ನು ಹೆಚ್ಚಿಸುವ ಇಸ್ರೇಲ್‍ನ ನಿರ್ಧಾರವು ಒತ್ತೆಯಾಳುಗಳ ಬದುಕಿನ ಬಗ್ಗೆ ಕಾಳಜಿಯಿಲ್ಲದೆ ಗಾಝಾ ಪಟ್ಟಿಯ ಮೇಲೆ ನರಹಂತಕ ಯುದ್ಧವನ್ನು ಮುಂದುವರಿಸುವ ನೆತನ್ಯಾಹು ಅವರ ಉದ್ದೇಶವನ್ನು ಜಾಹೀರುಗೊಳಿಸಿದೆ. ಬೈಡನ್ ಅವರ ನಿಲುವು ನಾಝಿ ಯೆಹೂದಿಗಳ ಕ್ರಿಮಿನಲ್ ನೀತಿಗಳಿಗೆ ಅಮೆರಿಕದ ನೆರವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಗಾಝಾದಲ್ಲಿ ಫೆಲೆಸ್ತೀನೀಯರ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕ ರಾಜಕೀಯ ಆಶ್ರಯ ಮತ್ತು ಮಿಲಿಟರಿ ನೆರವನ್ನು ಮುಂದುವರಿಸಿದೆ. ಇಂತಹ ಹೇಳಿಕೆಗಳ ಮೂಲಕ ಇಸ್ರೇಲ್ ಸೇನೆ ಗಾಝಾದಲ್ಲಿನ ತನ್ನ ಉದ್ದೇಶಿತ ಗುರಿ ಸಾಧಿಸಲು ಇನ್ನಷ್ಟು ಸಮಯಾವಕಾಶ ಒದಗಿಸುವುದು ಬೈಡನ್ ಉದ್ದೇಶವಾಗಿದೆ ಎಂದು ಹಮಾಸ್ ಟೀಕಿಸಿದೆ.