ಇಸ್ರೇಲ್ ಗಾಝಾ ಯುದ್ಧ ನಿಲ್ಲಿಸಿದರೆ `ಸಂಪೂರ್ಣ ಒಪ್ಪಂದ'ಕ್ಕೆ ಸಿದ್ಧ : ಹಮಾಸ್
ಗಾಝಾ : ಆಕ್ರಮಣ ಮುಂದುವರಿಯುತ್ತಿರುವುದರಿಂದ ಈಗ ನಡೆಯುತ್ತಿರುವ ಸಂಧಾನ ಮಾತುಕತೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಇಸ್ರೇಲ್ ಯುದ್ಧವನ್ನು ನಿಲ್ಲಿಸಿದರೆ ಒತ್ತೆಯಾಳುಗಳು ಮತ್ತು ಕೈದಿಗಳ ವಿನಿಮಯ ಸೇರಿದಂತೆ ಸಂಪೂರ್ಣ ಒಪ್ಪಂದಕ್ಕೆ' ತಾನು ಸಿದ್ಧ ಎಂದು ಹಮಾಸ್ ಹೇಳಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿಯ ಉದ್ದೇಶದಿಂದ ಖತರ್, ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆ ಎರಡೂ ಕಡೆಯವರು ಮತ್ತೊಬ್ಬರನ್ನು ದೂಷಿಸುವುದರೊಂದಿಗೆ ಪದೇ ಪದೇ ಸ್ಥಗಿತಗೊಳ್ಳುತ್ತಿದೆ.
ಸಂಧಾನ ಮಾತುಕತೆ ಸಂದರ್ಭ `ಹೊಂದಾಣಿಕೆ' ಮನೋಭಾವವನ್ನು ಪ್ರದರ್ಶಿಸಿದ್ದೇನೆ ಮತ್ತು ಈ ಹಿಂದಿನ ಪ್ರತೀ ಹಂತದ ಮಾತುಕತೆಯಲ್ಲೂ ಸಕಾರಾತ್ಮಕ ಮನೋಭಾವದಿಂದ ಪಾಲ್ಗೊಂಡಿದ್ದೇನೆ. ಮೇ 6ರಂದು ನಡೆದಿದ್ದ ಮಾತುಕತೆಯಲ್ಲೂ ಮಧ್ಯಸ್ಥಿಕೆದಾರರು ಮುಂದಿರಿಸಿದ್ದ ಪ್ರಸ್ತಾವನೆಗೆ ಮುಕ್ತ ಮನಸ್ಸಿನಿಂದ ಸಮ್ಮತಿಸಿದ್ದೇನೆ. ಆದರೆ ನಮ್ಮ ಜನರ ಆಕ್ರಮಣ, ಮುತ್ತಿಗೆ, ಹಸಿವು ಮತ್ತು ನರಮೇಧದ ಜತೆಗೆ ಕದನ ವಿರಾಮ ಒಪ್ಪಂದದ ಮಾತುಕತೆ ಮುಂದುವರಿಸುವ ನೀತಿಯ ಭಾಗವಾಗಿರಲು ಹಮಾಸ್ ಮತ್ತು ಫೆಲೆಸ್ತೀನೀಯರು ಒಪ್ಪುವುದಿಲ್ಲ. ಆಕ್ರಮಣಕಾರರು ಗಾಝಾದಲ್ಲಿ ನಮ್ಮ ಜನರ ವಿರುದ್ಧದ ಯುದ್ಧವನ್ನು ನಿಲ್ಲಿಸಿದರೆ ಸಮಗ್ರ ವಿನಿಮಯ ಒಪ್ಪಂದ ಸೇರಿದ ಸಂಪೂರ್ಣ ಒಪ್ಪಂದಕ್ಕೆ ನಾವು ಸಿದ್ಧ ಎಂಬುದನ್ನು ಮಧ್ಯಸ್ಥಿಕೆದಾರರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹಮಾಸ್ ಹೇಳಿದೆ.
ಈ ಹಿಂದಿನ ಸಂಧಾನ ಮಾತುಕತೆಯಲ್ಲೂ ಉಭಯ ಕಡೆಯವರೂ ಕೆಲವು ಷರತ್ತುಗಳನ್ನು ಮುಂದಿರಿಸಿದ್ದರು. ಸಂಪೂರ್ಣ ಕದನವಿರಾಮ, ಗಾಝಾದಿಂದ ಇಸ್ರೇಲ್ ಪಡೆಗಳ ಸಂಪೂರ್ಣ ವಾಪಸಾತಿ ಮತ್ತು ಸ್ಥಳಾಂತರಿತ ಫೆಲೆಸ್ತೀನೀಯರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಮನೆಗಳಿಗೆ ಹಿಂದಿರುಗುವುದನ್ನು ಖಚಿತಪಡಿಸದ ಯಾವುದೇ ಮಾತುಕತೆ ತಮಗೆ ಸ್ವೀಕಾರಾರ್ಹವಲ್ಲ ಎಂದು ಹಮಾಸ್ ಒತ್ತಿಹೇಳಿದೆ. ಆದರೆ ಹಮಾಸ್ನ ಬೇಡಿಕೆಯನ್ನು ಒಪ್ಪುವುದಿಲ್ಲ ಮತ್ತು ಹಮಾಸ್ ಅನ್ನು ಗಾಝಾದಿಂದ ಪದಚ್ಯುತಗೊಳಿಸುವ ನಿರ್ಧಾರಕ್ಕೆ ಬದ್ಧ ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ.
ಒತ್ತೆಯಾಳುಗಳ ಬಿಡುಗಡೆಯಾಗದೆ ಯುದ್ಧ ನಿಲ್ಲದು : ಇಸ್ರೇಲ್
ಒತ್ತೆಯಾಳುಗಳ ವಾಪಸಾತಿಯನ್ನು ಒಳಗೊಂಡಿರದ ಯಾವುದೇ ಕದನ ವಿರಾಮ ಮಾತುಕತೆಯನ್ನು ಇಸ್ರೇಲ್ ಒಪ್ಪುವುದಿಲ್ಲ ಎಂದು ಇಸ್ರೇಲ್ನ ಹಿರಿಯ ಭದ್ರತಾ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಯ ಅಂಶವನ್ನು ಹೊಂದಿರದ ಯಾವುದೇ ಕದನ ವಿರಾಮ ಒಪ್ಪಂದ ಅಥವಾ ಯುದ್ಧದ ನಿಲುಗಡೆ ಸಾಧ್ಯವಿಲ್ಲ. ಯಾವುದೇ ಕದನ ವಿರಾಮವು ಒಪ್ಪಂದದ ಚೌಕಟ್ಟಿನೊಳಗೆ ಇರಬೇಕು ಮತ್ತು ಈ ಚೌಕಟ್ಟಿನಲ್ಲಿ ಒತ್ತೆಯಾಳುಗಳ ವಾಪಸಾತಿ ವಿಷಯ ಸೇರಿರಬೇಕು' ಎಂದು ಇಸ್ರೇಲ್ ಸೇನೆ ಹೇಳಿದೆ.
ಉತ್ತರ ಗಾಝಾದ ಜಬಾಲಿಯಾ ಪ್ರದೇಶದಲ್ಲಿ 10 ಮೀಟರ್ಗೂ ಉದ್ದದ ಸುರಂಗವನ್ನು ನಾಶಗೊಳಿಸುವುದರೊಂದಿಗೆ ಇಲ್ಲಿ ಇಸ್ರೇಲ್ ಪಡೆಯ ಕಾರ್ಯಾಚರಣೆ ಅಂತ್ಯಗೊಂಡಿದೆ . ಗಾಝಾದ ದಕ್ಷಿಣದ ರಫಾ ನಗರದಲ್ಲಿ ಇಸ್ರೇಲ್ ಪಡೆ ಮುನ್ನಡೆ ಸಾಧಿಸಿದ್ದು ನಗರದ ಕೇಂದ್ರದಲ್ಲಿ ಹಮಾಸ್ ಸ್ಥಾಪಿಸಿರುವ ಸುರಂಗಗಳು, ರಾಕೆಟ್ ಲಾಂಚರ್ಗಳು ಹಾಗೂ ಇತರ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಪತ್ತೆಹಚ್ಚಲಾಗಿದೆ. ಟ್ಯಾಂಕ್ಗಳ ನೇತೃತ್ವದಲ್ಲಿ ಇಸ್ರೇಲ್ನ ಪಡೆ ಹಮಾಸ್ನ ಹೋರಾಟದ ವ್ಯವಸ್ಥೆಗಳನ್ನು ಮುರಿಯುವ ಗುರಿ ಹೊಂದಿದೆ. ಈ ಕಾರ್ಯಾಚರಣೆಯ ಸಂದರ್ಭ ಹಮಾಸ್ನ ಒತ್ತೆಸೆರೆಯಲ್ಲಿರುವ 250 ಒತ್ತೆಯಾಳುಗಳಲ್ಲಿ 7 ಮಂದಿಯ ಮೃತದೇಹವನ್ನು ಪಡೆಗಳು ಪತ್ತೆಹಚ್ಚಿವೆ ಎಂದು ಮಿಲಿಟರಿ ಹೇಳಿದೆ. ಜಬಾಲಿಯಾದಲ್ಲಿ ನಾಗರಿಕ ಪ್ರದೇಶವನ್ನು ಹಮಾಸ್ ಯುದ್ಧವಲಯವಾಗಿ ಪರಿವರ್ತಿಸಿದೆ. ಇಲ್ಲಿ ನಡೆದ ನಿಕಟ ಯುದ್ಧದಲ್ಲಿ ಇಸ್ರೇಲ್ ಸೇನೆ ಹಮಾಸ್ನ ನೂರಾರು ಹೋರಾಟಗಾರರನ್ನು ಹತ್ಯೆ ಮಾಡಿದ್ದು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಸುಮಾರು 10 ಕಿ.ಮೀ ವ್ಯಾಪ್ತಿಯ, ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ ಭೂಗತ ಸುರಂಗ ನೆಲೆಯನ್ನು ಪತ್ತೆಹಚ್ಚಿ ಹಮಾಸ್ನ ಜಿಲ್ಲಾ ಕಮಾಂಡರ್ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದ್ದು ಹಮಾಸ್ ಉದ್ದೇಶಪೂರ್ವಕವಾಗಿ ವಸತಿ ಪ್ರದೇಶಗಳಲ್ಲಿ ಹೋರಾಟಗಾರರನ್ನು ನೆಲೆಗೊಳಿಸುವ ಮೂಲಕ ಯುದ್ಧದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರ ಸಾವು-ನೋವು ಸಂಭವಿಸಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.