ಸಿರಿಯಾ ಅಧ್ಯಕ್ಷ ಅಸ್ಸಾದ್ ಪ್ರಯಾಣಿಸುತ್ತಿದ್ದ ವಿಮಾನ ಪತನ?
ಬೈರುತ್: ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರು ಡಮಾಸ್ಕಸ್ ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಅವರ ವಿಮಾನ ಅಪಘಾತಕ್ಕೀಡಾಗಿರಬಹುದು ಅಥವಾ ವಿಮಾನವನ್ನು ಹೊಡೆದುರುಳಿಸಲ್ಪಟ್ಟಿರಬಹುದು ಎಂದು ವರದಿಯಾಗಿದ್ದು, ಅಸ್ಸಾದ್ ಬಗ್ಗೆ ಆತಂಕ ವ್ಯಕ್ತವಾಗಿದೆ.
Flightradar24.com ವರದಿಯ ಪ್ರಕಾರ, ಸಿರಿಯನ್ ಏರ್ ವಿಮಾನವು ಡಮಾಸ್ಕಸ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿರುವುದನ್ನು ತೋರಿಸುತ್ತದೆ, ಬಂಡುಕೋರರು ರಾಜಧಾನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಲ್ಯುಶಿನ್ Il-76T ವಿಮಾನವು ಆರಂಭದಲ್ಲಿ ಸಿರಿಯಾದ ಕರಾವಳಿ ಪ್ರದೇಶದ ಕಡೆಗೆ ಹೋಗುತ್ತಿತ್ತು. ಆದರೆ, ಅದು ಹಠಾತ್ತನೆ ಮಾರ್ಗವನ್ನು ಬದಲಾಯಿಸಿದೆ ಮತ್ತು ಹೋಮ್ಸ್ ನಗರದ ಬಳಿ ರಾಡಾರ್ ನಿಂದ ಕಣ್ಮರೆಯಾಗುವ ಮೊದಲು ಹಲವಾರು ನಿಮಿಷಗಳ ಕಾಲ ವಿರುದ್ಧ ದಿಕ್ಕಿನಲ್ಲಿ ಹಾರಾಟ ನಡೆಸಿದೆ ಎಂದು ಹೇಳಿದೆ.
ಈ ಬೆಳವಣಿಗೆಯು ವ್ಯಾಪಕವಾದ ಊಹಾಪೋಹಗಳನ್ನು ಹುಟ್ಟುಹಾಕಿದೆ. ಸಿರಿಯಾದ ಅಧಿಕಾರಿಗಳು ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡಿಲ್ಲ. ವಿಮಾನದ ಹಠಾತ್ ಕಣ್ಮರೆಯು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಮಾನದ ಹಾದಿಯಲ್ಲಿನ ಹಠಾತ್ ಬದಲಾವಣೆ ಮತ್ತು ನಂತರದ ಸಿಗ್ನಲ್ ಕಳೆದುಕೊಂಡಿರುವುದು ವಿಮಾನವನ್ನು ಹೊಡೆದುರುಳಿಸಿರಬಹುದು ಅಥವಾ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿರಬಹುದು ಎಂಬ ಸಂಶಯವನ್ನು ಹುಟ್ಟು ಹಾಕಿದೆ.
ವಿಮಾನದಲ್ಲಿದ್ದವರ ಗುರುತನ್ನು ದೃಢೀಕರಿಸಲಾಗಿಲ್ಲವಾದರೂ, ಘಟನೆಯಲ್ಲಿ "ಅಸ್ಸಾದ್ ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದೆ" ಎಂದು ಸಿರಿಯನ್ ಮೂಲಗಳು ತಿಳಿಸಿರುವ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.