ಜೀವಹಾನಿ ಸಂಭವಿಸಿದಾಗ ಹೃದಯ ಕಲಕುತ್ತದೆ : ಮೋದಿ

Update: 2024-07-09 16:26 GMT

PC : PTI 

ಮಾಸ್ಕೋ : ರಶ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ವ್ಯಾಪಕ ಮಾತುಕತೆ ನಡೆಸಿದರು. ರಶ್ಯ-ಉಕ್ರೇನ್ ಯುದ್ಧದ ಬಗ್ಗೆಯೂ ಪುಟಿನ್ ಜತೆ ಚರ್ಚಿಸಿದ ಅವರು `ಶಾಂತಿಯ ಮರುಸ್ಥಾಪನೆಗಾಗಿ ಭಾರತ ಎಲ್ಲಾ ರೀತಿಯಲ್ಲೂ ಸಹಕರಿಸಲು ಸಿದ್ಧವಿದೆ' ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಯುದ್ಧ ಆಗಿರಲಿ, ಸಂಘರ್ಷವಾಗಿರಲಿ, ಭಯೋತ್ಪಾದಕ ದಾಳಿ ಆಗಿರಲಿ- ಜೀವಹಾನಿ ಸಂಭವಿಸಿದಾಗ ಮಾನವೀಯತೆಯಲ್ಲಿ ವಿಶ್ವಾಸವಿರಿಸಿದ ಎಲ್ಲರಿಗೂ ನೋವಾಗುತ್ತದೆ. ಆದರೆ, ಅಮಾಯಕ ಮಕ್ಕಳ ಹತ್ಯೆಯಾದಾಗ, ಅಮಾಯಕ ಮಕ್ಕಳು ಸಾಯುವುದನ್ನು ನೋಡುವಾಗ ಹೃದಯ ಕಲಕುತ್ತದೆ. ಆ ನೋವು ಅಪಾರವಾಗಿದೆ. ಈ ವಿಷಯದ ಬಗ್ಗೆಯೂ ನಾವು ವಿವರವಾಗಿ ಚರ್ಚೆ ನಡೆಸಿದ್ದೇವೆ . ಭಾರತವು ಕಳೆದ 40 ವರ್ಷದಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಯೋತ್ಪಾದನೆ ಎಷ್ಟು ಅಹಿತರ ಮತ್ತು ಭಯಾನಕವೆಂಬುದು ನಮಗೆ ತಿಳಿದಿದೆ. ಆದ್ದರಿಂದ ರಶ್ಯದಲ್ಲಿ , ಡಾಗೆಸ್ತಾನದಲ್ಲಿ ಭಯೋತ್ಪಾದಕ ಘಟನೆ ನಡೆದಾಗ ಅದರ ನೋವು ಎಷ್ಟು ಆಳವಾಗಿದೆ ಎಂದು ನಾನು ಊಹಿಸಬಲ್ಲೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುವುದಾಗಿ ಎಂದು ಮೋದಿ ಹೇಳಿದ್ದಾರೆ.

ಭಾರತದ ಇಂಧನದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಿದ್ದಕ್ಕಾಗಿ ರಶ್ಯಕ್ಕೆ ಧನ್ಯವಾದ ಸಲ್ಲಿಸಿದ ಮೋದಿ `ಇಂಧನಕ್ಕೆ ಸಂಬಂಧಿಸಿ ಭಾರತ-ರಶ್ಯ ಒಪ್ಪಂದವು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸ್ಥಿರತೆಯನ್ನು ತರುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಜಗತ್ತು ಒಪ್ಪಿಕೊಳ್ಳಬೇಕು. ಜಗತ್ತು ಆಹಾರ, ಇಂಧನ ಮತ್ತು ರಸಗೊಬ್ಬರದ ಕೊರತೆ ಎದುರಿಸಿದಾಗ ನಾವು ನಮ್ಮ ರೈತರಿಗೆ ಸಮಸ್ಯೆಯಾಗಲು ಅವಕಾಶ ನೀಡಲಿಲ್ಲ. ರಶ್ಯದೊಂದಿಗಿನ ಸಂಬಂಧ ಇದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು ' ಎಂದರು.

ಮಾಸ್ಕೋದಲ್ಲಿ ಪುಟಿನ್ ಜತೆ ನಡೆಸಿದ ದ್ವಿಪಕ್ಷೀಯ ಮಾತುಕತೆಯ ಸಂದರ್ಭ ರಶ್ಯ-ಉಕ್ರೇನ್ ಯುದ್ಧವನ್ನು ಪ್ರಸ್ತಾವಿಸಿದ ಮೋದಿ ` ಭಾರತವು ಶಾಂತಿಯ ಪರವಾಗಿದೆ ಎಂದು ನಿಮಗೆ ಮತ್ತು ವಿಶ್ವಸಮುದಾಯಕ್ಕೆ ಭರವಸೆ ನೀಡುತ್ತೇನೆ. ನಿನ್ನೆ ನನ್ನ ಮಿತ್ರ ಪುಟಿನ್ ಶಾಂತಿಯ ಬಗ್ಗೆ ಮಾತನಾಡಿರುವುದನ್ನು ಕೇಳಿದಾಗ ನನಗೆ ಭರವಸೆಯ ಕಿರಣ ಗೋಚರಿಸಿದೆ. ಇದು ಸಾಧ್ಯ ಎಂಬ ಆಶಾವಾದ ಮೂಡಿದೆ.

ಭಾರತ ಮತ್ತು ರಶ್ಯದ ನಡುವೆ ಬಲವಾದ ಸಂಬಂಧವಿದೆ. ಕಳೆದ 25 ವರ್ಷಗಳಲ್ಲಿ ಉಭಯ ದೇಶಗಳ ನಡುವೆ 22 ದ್ವಿಪಕ್ಷೀಯ ಸಭೆ ನಡೆದಿದೆ. ಕಳೆದ ಸುಮಾರು 10 ವರ್ಷದಲ್ಲಿ ನಾನು ಮತ್ತು ಪುಟಿನ್ 17 ಬಾರಿ ಭೇಟಿಯಾಗಿದ್ದೇವೆ. ಇದು ನಮ್ಮ ನಡುವಿನ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ' ಎಂದರು.

ರಶ್ಯದ ಸೇನೆಗೆ ಸೇರಿರುವ ಭಾರತೀಯರ ಬಿಡುಗಡೆಗೆ ಸಮ್ಮತಿ

ಉದ್ಯೋಗ ಅಥವಾ ಉನ್ನತ ಶಿಕ್ಷಣದ ವ್ಯವಸ್ಥೆ ಕಲ್ಪಿಸುವ ಆಮಿಷವೊಡ್ಡಿ ರಶ್ಯದ ಸೇನೆಗೆ ಸೇರ್ಪಡೆಗೊಳಿಸಿರುವ ಭಾರತೀಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರು ಸ್ವದೇಶಕ್ಕೆ ಮರಳಲು ವ್ಯವಸ್ಥೆ ಮಾಡುವುದಾಗಿ ರಶ್ಯ ಮಂಗಳವಾರ ಭರವಸೆ ನೀಡಿದೆ.

ಪ್ರಧಾನಿ ಮೋದಿಯವರ ರಶ್ಯ ಭೇಟಿಯ ಸಂದರ್ಭದ ಪ್ರಮುಖ ಬೆಳವಣಿಗೆಯೊಂದರಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಈ ಘೋಷಣೆ ಮಾಡಿದ್ದಾರೆ. ಪುಟಿನ್ ಜತೆಗಿನ ಮಾತುಕತೆಯಲ್ಲಿ ಮೋದಿ ಈ ವಿಷಯವನ್ನು ಪ್ರಸ್ತಾವಿಸಿದ್ದರು. ಲಾಭದಾಯಕ ಹುದ್ದೆ ಅಥವಾ ಶಿಕ್ಷಣ ವ್ಯವಸ್ಥೆಯ ಆಮಿಷವೊಡ್ಡಿ ಹಲವಾರು ಭಾರತೀಯರನ್ನು ರಶ್ಯಕ್ಕೆ ಕರೆಸಿಕೊಂಡು ಅವರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಸೇನೆಗೆ ಸೇರ್ಪಡೆಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News