ಇಸ್ರೇಲ್‍ನತ್ತ ಕ್ಷಿಪಣಿ ದಾಳಿ ನಡೆಸಿದ ಹಿಜ್ಬುಲ್ಲಾ
ಬೈರೂತ್: ಇಸ್ರೇಲ್‍ನ ಪ್ರದೇಶದತ್ತ ಶುಕ್ರವಾರ 40ಕ್ಕೂ ಅಧಿಕ ರಾಕೆಟ್‍ಗಳನ್ನು ಪ್ರಯೋಗಿಸಿರುವುದಾಗಿ ಲೆಬನಾನ್‍ನಲ್ಲಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಹೇಳಿದೆ.
ಗಾಝಾದಲ್ಲಿ ಸಂಘರ್ಷ ಉಲ್ಬಣಿಸಿದ ಬಳಿಕ ಹಮಾಸ್‍ನ ಮಿತ್ರ ಹಿಜ್ಬುಲ್ಲಾ ಪ್ರತೀ ದಿನ ಲೆಬನಾನ್‍ನ ಗಡಿಯಾಚೆಗಿಂದ ಇಸ್ರೇಲ್‍ನ ಸೇನಾನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಶತ್ರುಗಳ ಫಿರಂಗಿ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
ಸುಮಾರು 40 ಕ್ಷಿಪಣಿಗಳನ್ನು ಉಡಾಯಿಸಿದ್ದು ಅದರಲ್ಲಿ ಕೆಲವನ್ನು ತುಂಡರಿಸಲಾಗಿದೆ. ಇದಕ್ಕೂ ಮುನ್ನ ಲೆಬನಾನ್ ಗಡಿಯಾಚೆಯಿಂದ ಹಾರಿ ಬಂದ ಹಿಜ್ಬುಲ್ಲಾಗಳ ಎರಡು ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ. ಈ ಮಧ್ಯೆ, ಲೆಬನಾನ್-ಇಸ್ರೇಲ್ ಗಡಿ ಸನಿಹದ ಹಲವು ಗ್ರಾಮಗಳ ಮೇಲೆ ಇಸ್ರೇಲ್ ಬಾಂಬ್‍ಗಳ ಮಳೆಗರೆದಿದೆ ಎಂದು ಲೆಬನಾನ್‍ನ ಸರಕಾರಿ ಸ್ವಾಮ್ಯದ ಮಾದ್ಯಮ ವರದಿ ಮಾಡಿದೆ. ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷದಲ್ಲಿ ಇದುವರೆಗೆ ಲೆಬನಾನ್‍ನಲ್ಲಿ 70 ನಾಗರಿಕರು ಸೇರಿದಂತೆ 363 ಮಂದಿ ಸಾವನ್ನಪ್ಪಿದ್ದರೆ ಇಸ್ರೇಲ್‍ನ 10 ಯೋಧರು ಮತ್ತು 8 ನಾಗರಿಕರು ಹತರಾಗಿದ್ದಾರೆ ಎಂದು ವರದಿಯಾಗಿದೆ.