ಇಸ್ರೇಲ್‍ನತ್ತ ರಾಕೆಟ್ ಮಳೆಗರೆದ ಹಿಜ್ಬುಲ್ಲಾ | 4 ಮಂದಿಗೆ ಗಾಯ; ಕಟ್ಟಡಗಳಿಗೆ ಬೆಂಕಿ

Update: 2024-09-22 16:13 GMT

PC : PTI

ಬೈರೂತ್ : ಲೆಬನಾನ್ ಮೂಲದ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಶನಿವಾರ ರಾತ್ರಿಯಿಂದ ಇಸ್ರೇಲ್‍ನತ್ತ 100ಕ್ಕೂ ಅಧಿಕ ರಾಕೆಟ್‍ಗಳನ್ನು ಪ್ರಯೋಗಿಸಿದೆ. ಇದರಲ್ಲಿ ಕೆಲವು ರಾಕೆಟ್‍ಗಳ ಹೈಫಾ ನಗರದ ಬಳಿ ಅಪ್ಪಳಿಸಿದೆ.

ಇದಕ್ಕೆ ಪ್ರತಿಯಾಗಿ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದ್ದು ಕೆಲ ದಿನಗಳಿಂದ ಮುಂದುವರಿದಿರುವ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧದ ರೂಪಕ್ಕೆ ತಿರುಗುವ ಅಪಾಯ ತಲೆದೋರಿದೆ.

ರಾಕೆಟ್ ಮತ್ತು ಸರಣಿ ಡ್ರೋನ್‍ಗಳು ಇಸ್ರೇಲ್ ಸೇನೆಯ ಬಂಕರ್ ಹಾಗೂ ಸೇನಾ ನೆಲೆಗೆ ಅಪ್ಪಳಿಸಿದೆ. ಶುಕ್ರವಾರ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ ಇದು ಪ್ರತೀಕಾರ ಕ್ರಮವಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ಹೇಳಿವೆ.

ಶನಿವಾರ ರಾತ್ರಿ ರಾಕೆಟ್ ದಾಳಿ ಆರಂಭಗೊಳ್ಳುತ್ತಿದ್ದಂತೆಯೇ ಉತ್ತರ ಇಸ್ರೇಲ್‍ನಾದ್ಯಂತ ವಾಯು ರಕ್ಷಣಾ ಸೈರನ್ ಮೊಳಗಿದ್ದು ಸಾವಿರಾರು ಜನರು ಸುರಕ್ಷಿತ ತಾಣ(ಶೆಲ್ಟರ್)ದತ್ತ ಧಾವಿಸಿದರು. ನಾಗರಿಕ ಪ್ರದೇಶದತ್ತ ರಾಕೆಟ್‍ಗಳನ್ನು ಪ್ರಯೋಗಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಹೈಫಾದ ಕಿರ್ಯತ್ ಬಯಾಲಿಕ್ ಪ್ರದೇಶದ ಜನವಸತಿ ಕಟ್ಟಡದ ಬಳಿ ಒಂದು ರಾಕೆಟ್ ಅಪ್ಪಳಿಸಿದ್ದು ಕನಿಷ್ಟ್ಠ 4 ಮಂದಿ ಗಾಯಗೊಂಡಿದ್ದಾರೆ ಮತ್ತು ಹಲವು ಕಟ್ಟಡಗಳು ಹಾಗೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇಸ್ರೇಲ್‍ನ ಮ್ಯಾಗೆನ್ ಡೇವಿಡ್ ಅಡೋಮ್ ರಕ್ಷಣಾ ಸೇವೆಯ ತಂಡ ಹೇಳಿದೆ.

ಇದಕ್ಕೆ ಪ್ರತಿಯಾಗಿ ರವಿವಾರ ದಕ್ಷಿಣ ಲೆಬನಾನ್‍ನಾದ್ಯಂತ ಸರಣಿ ಬಾಂಬ್ ದಾಳಿ ನಡೆಸಿದ್ದು ರಾಕೆಟ್ ಲಾಂಚರ್ಗಳು ಸೇರಿದಂತೆ 400ಕ್ಕೂ ಅಧಿಕ ಮಿಲಿಟರಿ ನೆಲೆಗಳಿಗೆ ಹಾನಿಯಾಗಿದೆ. ಗಡಿಯ ಬಳಿ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಲೆಬನಾನ್‍ನ ಆರೋಗ್ಯ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News