`ಬಾಂಗ್ಲಾಗೆ ಗೆಲುವು' ಘೋಷಣೆಯು ರಾಷ್ಟ್ರೀಯ ಘೋಷಣೆ ಎಂಬ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ
ಢಾಕಾ : ಶೇಖ್ ಮುಜೀಬುರ್ ರೆಹ್ಮಾನ್‍ರಿಂದ ಜನಪ್ರಿಯಗೊಂಡಿದ್ದ `ವಿಕ್ಟರಿ ಟು ಬಾಂಗ್ಲಾ' ಘೋಷಣೆಯನ್ನು ರಾಷ್ಟ್ರೀಯ ಘೋಷಣೆಯೆಂದು ಘೋಷಿಸಿದ್ದ ಹೈಕೋರ್ಟ್‍ನ ತೀರ್ಪಿಗೆ ಬಾಂಗ್ಲಾದ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಬಾಂಗ್ಲಾದೇಶ ರೂಪುಗೊಂಡಾಗ ದೇಶಭಕ್ತಿ ಮತ್ತು ಒಗ್ಗಟ್ಟಿನ ಸಂಕೇತವಾಗಿ ಬಾಂಗ್ಲಾದೇಶದ ಇತಿಹಾಸ ಮತ್ತು ಅಸ್ಮಿತೆಯ ಮಹತ್ವದ ಭಾಗವಾಗಿದ್ದ `ಬಾಂಗ್ಲಾಗೆ ಗೆಲುವು'ಕೇವಲ ರಾಜಕೀಯ ಘೋಷಣೆಯಾಗಿರಲಿಲ್ಲ. 2020ರ ಮಾರ್ಚ್ 10ರಂದು ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ 2022ರ ಮಾರ್ಚ್ 2ರಂದು ಅವಾಮಿ ಲೀಗ್ ಸರಕಾರ ಇದನ್ನು ರಾಷ್ಟ್ರೀಯ ಘೋಷಣೆಯೆಂದು ಹೆಸರಿಸಿತು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಈ ಘೋಷಣೆ ಮೊಳಗಿಸುವುದನ್ನು ಕಡ್ಡಾಯಗೊಳಿಸಿತ್ತು.
ಅವಾಮಿ ಲೀಗ್ ಸರಕಾರದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪದಚ್ಯುತಗೊಂಡ ಬಳಿಕ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಷ್ಟ್ರೀಯ ಘೋಷಣೆ ಎಂಬುದು ಸರಕಾರದ ಕಾರ್ಯನೀತಿಗೆ ಸಂಬಂಧಿಸಿದ್ದು ಮತ್ತು ಇದರಲ್ಲಿ ನ್ಯಾಯಾಂಗದ ಪಾತ್ರವಿಲ್ಲ ಎಂದು ಹೇಳಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.