ಖಾಲಿಸ್ತಾನಿ ಗುಂಪು, ಟ್ರೂಡೊ ವಿರುದ್ಧ ನಿರ್ಣಯ ಅಂಗೀಕರಿಸಿದ ಕೆನಡಾದ ಸಿಖ್, ಹಿಂದು ಸಂಘಟನೆ
ಒಟ್ಟಾವ : ಕೆನಡಾದ ಸಿಖ್ ಮತ್ತು ಹಿಂದುಗಳ ಗುಂಪು ಸೋಮವಾರ ಸಭೆ ಸೇರಿ ಖಾಲಿಸ್ತಾನಿ ಪರ ಗುಂಪುಗಳು ಹಾಗೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ವಿರುದ್ಧ ನಿರ್ಣಯವನ್ನು ಅಂಗೀಕರಿಸಿರುವುದಾಗಿ ವರದಿಯಾಗಿದೆ.
ವ್ಯಾಂಕೋವರ್ ಗುರುದ್ವಾರದ ಖಾಲ್ಸಾ ದಿವಾನ್ ಸೊಸೈಟಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಖ್ ಮತ್ತು ಹಿಂದುಗಳ 36 ಸೊಸೈಟಿಗಳ ಸುಮಾರು 1000 ಸದಸ್ಯರು ಪಾಲ್ಗೊಂಡಿದ್ದರು. `ಕೇವಲ 3ರಿಂದ 4%ದಷ್ಟು ಇರುವ ಖಾಲಿಸ್ತಾನಿ ಪರ ಗುಂಪುಗಳ ಕೃತ್ಯಗಳಿಂದ ತೀವ್ರ ಅಸಮಾಧಾನಗೊಂಡಿದ್ದೇವೆ. ಗುರುದ್ವಾರ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗುರುದ್ವಾರಗಳನ್ನು ಖಾಲಿಸ್ತಾನ್ ಪರ ಗುಂಪುಗಳ ಹಿಡಿತದಿಂದ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಜತೆಗೆ ಕೆನಡಾದಲ್ಲಿ ಹಿಂದುಗಳ ಹಾಗೂ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿಗಳು ಟ್ರೂಡೊ ಅವರ ಪರಂಪರೆಯಾಗಿದೆ ಮತ್ತು ಇದು ಸ್ವೀಕಾರಾರ್ಹವಲ್ಲ. ಮುಂದಿನ ದಿನಗಳಲ್ಲಿ ಈ ದಾಳಿ ನಡೆಸುವ ಗೂಂಡಾಗಳಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಎಲ್ಲರೂ ಒಗ್ಗೂಡಲಿದ್ದೇವೆ' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.