ಗಾಝಾ ಮೇಲೆ ಮುಂದುವರಿದ ಇಸ್ರೇಲ್ ದಾಳಿ: 31 ನಾಗರಿಕರ ಹತ್ಯೆ
ಗಾಝಾ: ಗಾಝಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 31 ನಾಗರಿಕರು ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ THE ECONOMIC TIMES ವರದಿ ಮಾಡಿದೆ.
ತನ್ನ ದಾಳಿಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್, ದಾಳಿಯು ಹಮಾಸ್ ಮರುಸಂಘಟನೆಯನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಬೈತ್ ಲಾಹಿಯಾ ಪಟ್ಟಣ ಮತ್ತು ಜಬಾಲಿಯಾದಲ್ಲಿನ ಮನೆಗಳ ಮೇಲೆ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಕನಿಷ್ಠ 13 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಉಳಿದವರು ಗಾಝಾ ನಗರದಲ್ಲಿ ಮತ್ತು ದಕ್ಷಿಣ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಗಾಝಾದಲ್ಲಿ ಇಸ್ರೇಲ್ ಮಿಲಿಟರಿ ಆಕ್ರಮಣದಿಂದ ಜಬಾಲಿಯಾ, ಬೈತ್ ಲಾಹಿಯಾ ಮತ್ತು ಬೈತ್ ಹನೌನ್ನಲ್ಲಿ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ. ಉತ್ತರ ಗಾಝಾದ ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ಇಸ್ರೇಲ್ ಪಡೆಗಳು ದಾಳಿ ಮಾಡಿದ್ದು, ಹಲವು ಮಕ್ಕಳಿಗೆ ಗಾಯಗಳಾಗಿದೆ. ಆರೋಗ್ಯ ಸೌಲಭ್ಯದ ಮೇಲೆ ಕೂಡ ಭಾರೀ ಪ್ರಭಾವ ಬೀರಿದೆ.
ಇಸ್ರೇಲ್ ಪಡೆಗಳು ಲೆಬನಾನ್ ನಲ್ಲೂ ದಾಳಿಯನ್ನು ಮುಂದುವರಿಸಿದೆ. ಲೆಬನಾನ್ ನಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿಗಳ ಹತ್ಯೆ ಬೆನ್ನಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ರಕ್ಷಣೆ ಕುರಿತ ತಮ್ಮ ಮನವಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚರಿಸಿದೆ.