ಸಿರಿಯಾದಲ್ಲಿ ಇಸ್ರೇಲ್ ಕಾರ್ಯಾಚರಣೆ : ಇರಾನ್ ನ ಗುಪ್ತಚರ ಏಜೆಂಟ್ ಬಂಧನ
ಟೆಲ್ಅವೀವ್ : ಸಿರಿಯಾದಲ್ಲಿ ರವಿವಾರ ನಡೆಸಿದ ಭೂ ಕಾರ್ಯಾಚರಣೆಯಲ್ಲಿ ಇರಾನ್ ಪರ ಕಾರ್ಯ ನಿರ್ವಹಿಸುತ್ತಿದ್ದ ಸಿರಿಯಾ ಪ್ರಜೆಯನ್ನು ಬಂಧಿಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಈ ಹಿಂದೆ ಸಿರಿಯಾದಲ್ಲಿ ಲೆಬನಾನ್ ನ ಹಿಜ್ಬುಲ್ಲಾ ಹಾಗೂ ಇರಾನ್ ನ ಪರ ಕಾರ್ಯನಿರ್ವಹಿಸುವ ಇತರ ಗುಂಪುಗಳ ವಿರುದ್ಧ ಇಸ್ರೇಲ್ ಹಲವು ಬಾರಿ ವೈಮಾನಿಕ ದಾಳಿ ನಡೆಸಿದೆ. ಆದರೆ ಈಗ ನಡೆಯುತ್ತಿರುವ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಸಿರಿಯಾದಲ್ಲಿ ತನ್ನ ಪಡೆಗಳು ಭೂ ಕಾರ್ಯಾಚರಣೆ ನಡೆಸಿದ್ದು ಇದು ಇತ್ತೀಚೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯ ಭಾಗವಾಗಿದೆ ಎಂದು ಇಸ್ರೇಲ್ ಘೋಷಿಸಿದೆ.
ಸಿರಿಯಾ ಸರಕಾರ ಅಥವಾ ಹಿಜ್ಬುಲ್ಲಾ ಈ ಕಾರ್ಯಾಚರಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು `ದೇಶದ ದಕ್ಷಿಣ ಭಾಗದಲ್ಲಿ ಇಸ್ರೇಲ್ ಪಡೆಗಳು ಅಪಹರಣ ಕಾರ್ಯಾಚರಣೆ ನಡೆಸಿವೆ' ಎಂದು ವರದಿ ಮಾಡಿವೆ.
ಈ ಮಧ್ಯೆ, ಕಳೆದ 6 ವಾರಗಳಿಂದ ಲೆಬನಾನ್ ಮೇಲೆ ತೀವ್ರ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್, ಗಡಿಭಾಗದ ಪ್ರದೇಶದಲ್ಲಿ ಭೂ ಕಾರ್ಯಾಚರಣೆಯನ್ನೂ ಮುಂದುವರಿಸಿದೆ. ರವಿವಾರ ಇಸ್ರೇಲ್-ಲೆಬನಾನ್ ಗಡಿಭಾಗಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು `ಸಿರಿಯಾದ ಮೂಲಕ ಲೆಬನಾನ್ ಗೆ ಇರಾನ್ ನ ಶಸ್ತ್ರಾಸ್ತ್ರ ವರ್ಗಾವಣೆಯನ್ನು ತಡೆಯಲು ಗಡಿಭಾಗದ ಬಳಿ ಹೆಚ್ಚಿನ ನಿಗಾ ವಹಿಸಲಾಗಿದೆ. ಗಡಿಭಾಗದ ಬಳಿಯಿಂದ ಹಿಜ್ಬುಲ್ಲಾಗಳನ್ನು ಹಿಂದಕ್ಕೆ ಅಟ್ಟುವುದು ನಮ್ಮ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ' ಎಂದಿದ್ದಾರೆ.