ಮಾನವ ಕಳ್ಳಸಾಗಣೆ ಪ್ರಕರಣ | ಭಾರತೀಯ ಮೂಲದ 4 ಮಂದಿ ಬಂಧನ
ನ್ಯೂಯಾರ್ಕ್ : ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಟೆಕ್ಸಾಸ್ ರಾಜ್ಯದ ಪ್ರಿನ್ಸ್‌ಟನ್ ಭಾರತೀಯ ಮೂಲದ ನಾಲ್ಕು ಮಂದಿಯನ್ನು ಬಂಧಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಚಂದನ್ ದಾಸಿರೆಡ್ಡಿ (24 ವರ್ಷ), ಸಂತೋಷ್ ಕಟ್ಕೂರಿ (31 ವರ್ಷ), ದ್ವಾರಕಾ ಗುಂಡ(31 ವರ್ಷ) ಮತ್ತು ಅನಿಲ್ ಮಾಲೆ(37) ಬಂಧಿತ ಆರೋಪಿಗಳು. ಇವರು ಪ್ರಿನ್ಸ್ಟನ್ ಕಾಲಿನ್ ನಗರದಲ್ಲಿ `ಬಲವಂತದ ಕಾರ್ಮಿಕ' ಯೋಜನೆಯನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಕಾಲಿನ್ ನಗರದ ಮನೆಯೊಂದರಲ್ಲಿ 15 ಮಹಿಳಾ ಕಾರ್ಮಿಕರನ್ನು ಅಮಾನವೀಯ ರೀತಿಯಲ್ಲಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಬಂದ ದೂರಿನಂತೆ ಪೊಲೀಸರು ಮನೆಗೆ ತೆರಳಿ ಶೋಧ ನಡೆಸಿದ್ದಾರೆ. ಆಗ ಮನೆಯ ಪ್ರತಿಯೊಂದು ಕೋಣೆಯ ನೆಲದಲ್ಲಿಯೂ ಸುಮಾರು 15 ಮಹಿಳೆಯರು ಮಲಗಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಸಂತೋಷ್ ಕಟ್ಕೂರಿ ಮತ್ತು ಆತನ ಪತ್ನಿ ದ್ವಾರಕಾ ಗುಂಡ ಅವರು ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ ಅದರಲ್ಲಿ ಕೆಲಸದ ಆಮಿಷ ಒಡ್ಡಿ ತಮ್ಮನ್ನು ಕರೆಸಿಕೊಂಡು ಬಲವಂತದ ದುಡಿಮೆಗೆ ಬಳಸುತ್ತಿರುವುದಾಗಿ ದೂರು ನೀಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಫಾಕ್ಸ್ 4 ನ್ಯೂಸ್ ವರದಿ ಮಾಡಿದೆ.